July 29, 2026
Wednesday, July 29, 2026
spot_img

ಚೀನಾದ ‘ಕೃತಕ ಸೂರ್ಯ’ ಸೃಷ್ಟಿ ಕನಸಿಗೆ ಹೊಸ ಬಲ: ವಿಶ್ವದ ಅತಿದೊಡ್ಡ ಫ್ಯೂಷನ್ ಮ್ಯಾಗ್ನೆಟ್ ಪರೀಕ್ಷೆ ಯಶಸ್ವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಕ್ಲಿಯರ್ ಫ್ಯೂಷನ್ ತಂತ್ರಜ್ಞಾನದಲ್ಲಿ ಚೀನಾ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ವಿಶ್ವದ ಅತಿದೊಡ್ಡ ಸೂಪರ್‌ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್‌ನ್ನು ಯಶಸ್ವಿಯಾಗಿ ನಿರ್ಮಿಸಿ ಪರೀಕ್ಷಿಸಿರುವುದಾಗಿ ಅದು ಘೋಷಿಸಿದ್ದು, ‘ಕೃತಕ ಸೂರ್ಯ’ನ ನಿರ್ಮಾಣದತ್ತ ತನ್ನ ಮಹತ್ವಾಕಾಂಕ್ಷೆಯ ಯೋಜನೆಗೆ ಹೊಸ ಬಲ ಸಿಕ್ಕಿದೆ ಎಂದು ಹೇಳಿಕೊಂಡಿದೆ.

ಈ ಮ್ಯಾಗ್ನೆಟ್‌ನ್ನು ಚೀನಾದ ಅಕಾಡೆಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಮಾ ಫಿಸಿಕ್ಸ್ ಅಭಿವೃದ್ಧಿಪಡಿಸಿದೆ. ಸುಮಾರು 21 ಮೀಟರ್ ಉದ್ದ, 12 ಮೀಟರ್ ಅಗಲ ಹಾಗೂ 582 ಟನ್ ತೂಕ ಹೊಂದಿರುವ ಈ ದೈತ್ಯ ಮ್ಯಾಗ್ನೆಟ್, ಫ್ಯೂಷನ್ ರಿಯಾಕ್ಟರ್‌ನಲ್ಲಿ ಅತ್ಯಧಿಕ ಉಷ್ಣಾಂಶದ ಪ್ಲಾಸ್ಮಾವನ್ನು ನಿಯಂತ್ರಿಸುವ ಪ್ರಮುಖ ಘಟಕವಾಗಿದೆ.

ಏನಿದು ‘ಕೃತಕ ಸೂರ್ಯ’?

ಸೂರ್ಯನ ಒಳಭಾಗದಲ್ಲಿ ನಡೆಯುವ ಪರಮಾಣು ಸಮ್ಮಿಲನ (Nuclear Fusion) ಪ್ರಕ್ರಿಯೆಯನ್ನು ಭೂಮಿಯ ಮೇಲೆಯೇ ಮರುಸೃಷ್ಟಿಸಿ ಶುದ್ಧ ವಿದ್ಯುತ್ ಉತ್ಪಾದಿಸುವ ರಿಯಾಕ್ಟರ್. ಇದರಲ್ಲಿ ಹೈಡ್ರೋಜನ್ ಪರಮಾಣುಗಳು ಅತ್ಯಧಿಕ ತಾಪಮಾನದಲ್ಲಿ ಒಂದಾಗುವ ಮೂಲಕ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೈಡ್ ಅಥವಾ ಅಪಾಯಕಾರಿ ಪರಮಾಣು ತ್ಯಾಜ್ಯ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ.

ಏಕೆ ಈ ಮ್ಯಾಗ್ನೆಟ್ ವಿಶೇಷ?

ಫ್ಯೂಷನ್ ಕ್ರಿಯೆ ನಡೆಯಲು ಸುಮಾರು 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಪ್ಲಾಸ್ಮಾವನ್ನು ರಿಯಾಕ್ಟರ್‌ನ ಗೋಡೆಗಳಿಗೆ ತಾಗದಂತೆ ಕಾಂತೀಯ ಕ್ಷೇತ್ರದ ಮೂಲಕ ನಿಯಂತ್ರಿಸಬೇಕು. ಈ ಕೆಲಸವನ್ನು ಸೂಪರ್‌ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್ ನಿರ್ವಹಿಸುತ್ತದೆ. ಹೊಸ ಮ್ಯಾಗ್ನೆಟ್ ವಿಶ್ವದ ಅತಿದೊಡ್ಡ ಫ್ಯೂಷನ್ ಯೋಜನೆಯಾದ ITERನಲ್ಲಿ ಬಳಸಲಾಗುತ್ತಿರುವ ಮ್ಯಾಗ್ನೆಟ್‌ಗಿಂತ 1.3 ಪಟ್ಟು ಹೆಚ್ಚಿನ ಪರಿಮಾಣ ಹಾಗೂ ಮೂರು ಪಟ್ಟು ಹೆಚ್ಚು ಶಕ್ತಿ ಸಂಗ್ರಹ ಸಾಮರ್ಥ್ಯ ಹೊಂದಿದೆ ಎಂದು ಚೀನಾ ತಿಳಿಸಿದೆ.

ಸ್ವದೇಶಿ ತಂತ್ರಜ್ಞಾನಕ್ಕೆ ಒತ್ತು

ಈ ಯೋಜನೆಯಲ್ಲಿ ಬಳಸಲಾದ ಪ್ರಮುಖ ತಂತ್ರಜ್ಞಾನ ಮತ್ತು ಘಟಕಗಳನ್ನು ಸಂಪೂರ್ಣವಾಗಿ ಸ್ವದೇಶಿಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ ಎಂದು ಚೀನಾ ಹೇಳಿಕೊಂಡಿದೆ. ಆರು ವರ್ಷಗಳ ಸಂಶೋಧನೆಯ ಫಲವಾಗಿ 47 ಪೇಟೆಂಟ್‌ಗಳು ಮತ್ತು 25 ಉದ್ಯಮ ಮಾನದಂಡಗಳು ರೂಪುಗೊಂಡಿವೆ. ಇದೇ ವೇಳೆ ಫ್ಯೂಷನ್ ರಿಯಾಕ್ಟರ್‌ನ ‘ಹೃದಯ’ವೆಂದು ಕರೆಯಲಾಗುವ ಹೈ ಟೆಂಪರೇಚರ್ ಸೂಪರ್‌ಕಂಡಕ್ಟಿಂಗ್ ಸೆಂಟ್ರಲ್ ಸೊಲೆನಾಯ್ಡ್ ಕಾಯ್ಲ್ ಪರೀಕ್ಷೆಯೂ ಯಶಸ್ವಿಯಾಗಿದೆ.

ಇದನ್ನೂ ಓದಿ:


ಈ ವರ್ಷದ ಆರಂಭದಲ್ಲಿ ಚೀನಾದ EAST (Experimental Advanced Superconducting Tokamak) ರಿಯಾಕ್ಟರ್ 1,066 ಸೆಕೆಂಡುಗಳ ಕಾಲ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಪ್ಲಾಸ್ಮಾ ಸ್ಥಿತಿಯನ್ನು ಕಾಯ್ದುಕೊಂಡು ದಾಖಲೆ ನಿರ್ಮಿಸಿತ್ತು. ಈಗ ಅದು ಮೂರು ಹಂತದ ಯೋಜನೆ ರೂಪಿಸಿದ್ದು, 2027ರೊಳಗೆ ಮುಂದಿನ ಹಂತದ ಫ್ಯೂಷನ್ ರಿಯಾಕ್ಟರ್, ನಂತರ 2030ರ ದಶಕದಲ್ಲಿ ಫ್ಯೂಷನ್ ವಿದ್ಯುತ್ ಉತ್ಪಾದನೆ, ಅಂತಿಮವಾಗಿ ವಿಶ್ವದ ಮೊದಲ ವಾಣಿಜ್ಯ ಫ್ಯೂಷನ್ ವಿದ್ಯುತ್ ಸ್ಥಾವರ ನಿರ್ಮಾಣ ಗುರಿ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !