September 29, 2026
Tuesday, September 29, 2026
spot_img

ಅಮೆರಿಕದಲ್ಲಿ ಅತಿ ದೊಡ್ಡ ಉಕ್ಕು ಕಾರ್ಖಾನೆ ಸ್ಥಾಪನೆ: ಭಾರತದ ‘ಎಸ್ಸಾರ್ ಗ್ರೂಪ್’ನಿಂದ ಭಾರೀ ಹೂಡಿಕೆ: ಟ್ರಂಪ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಮೂಲದ ಸಂಸ್ಥೆಯಾದ ಎಸ್ಸಾರ್ ಗ್ರೂಪ್ ಅಮೆರಿಕದ ಕೈಗಾರಿಕಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಹೂಡಿಕೆಗೆ ಕೈಹಾಕುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಅಮೆರಿಕದ ಅಯೋವಾ ರಾಜ್ಯದಲ್ಲಿ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಎಸ್ಸಾರ್ ಗ್ರೂಪ್ ತನ್ನ ಅಂಗಸಂಸ್ಥೆ ‘ಮೆಸಾಬಿ ಮೆಟಾಲಿಕ್ಸ್’ ಮೂಲಕ 18 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಿಂದ ಈ ಐತಿಹಾಸಿಕ ಒಪ್ಪಂದವನ್ನು ಪ್ರಕಟಿಸಿದ ಅಧ್ಯಕ್ಷ ಟ್ರಂಪ್, ಭಾರತೀಯ ಮೂಲದ ಉದ್ಯಮಿಗಳ ಈ ಹೆಜ್ಜೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ವಾರ್ಷಿಕ 10 ಮಿಲಿಯನ್ ಟನ್ ಉತ್ಪಾದನೆ

ಒಮ್ಮೆ ಈ ಬೃಹತ್ ಉಕ್ಕಿನ ಸ್ಥಾವರ ಕಾರ್ಯಾರಂಭ ಮಾಡಿದರೆ, ಇದು ವರ್ಷಕ್ಕೆ 10 ಮಿಲಿಯನ್ ಟನ್ ಉತ್ತಮ ಗುಣಮಟ್ಟದ ಉಕ್ಕನ್ನು ಉತ್ಪಾದಿಸಲಿದೆ. ಇದು ಅಮೆರಿಕದ ಅತ್ಯಂತ ದೊಡ್ಡ ಸಿಂಗಲ್-ಸೈಟ್ ಮಿಲ್ ಆಗಿ ಹೊರಹೊಮ್ಮಲಿದೆ.

ಉಕ್ಕಿನ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುವಿಗಾಗಿ ಎಸ್ಸಾರ್ ಸಂಸ್ಥೆಯು ಮಿನ್ನೇಸೋಟ ರಾಜ್ಯದಲ್ಲಿ 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ಹೊಸ ಕಬ್ಬಿಣದ ಅದಿರು ಗಣಿಯನ್ನು ಸ್ಥಾಪಿಸುತ್ತಿದೆ. ಇದು ಕಳೆದ 50 ವರ್ಷಗಳಲ್ಲಿ ಅಮೆರಿಕದ ನೆಲದಲ್ಲಿ ತಲೆಯೆತ್ತುತ್ತಿರುವ ಮೊದಲ ಹೊಸ ಗಣಿಯಾಗಿದೆ. ಈ ಮೂಲಕ ಗಣಿಯಿಂದ ಹಿಡಿದು ಕಾರ್ಖಾನೆಯವರೆಗೆ ಸಂಪೂರ್ಣ ಸ್ವದೇಶಿ ಸರಪಳಿಯನ್ನು ಹೊಂದಿರಲಿದೆ.

6,000 ಜನರಿಗೆ ಉದ್ಯೋಗಾವಕಾಶ

ಮುಂದಿನ 10 ವರ್ಷಗಳ ಅವಧಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಲಿರುವ ಈ ಯೋಜನೆಯಿಂದ ಅಮೆರಿಕದ ಆರ್ಥಿಕತೆಗೆ 95 ಬಿಲಿಯನ್ ಡಾಲರ್ ಕೊಡುಗೆ ಸಿಗಲಿದ್ದು, 6,000 ನಿರ್ಮಾಣ ಉದ್ಯೋಗಗಳು ಹಾಗೂ 2,000 ಖಾಯಂ ಉದ್ಯೋಗಗಳು ಸೃಷ್ಟಿಯಾಗಲಿವೆ.

 ಇದು ನನ್ನ ತಾಯ್ನಾಡಿಗೆ ಮರಳಿ ಬಂದಂತೆ

ಈ ಬಗ್ಗೆ ಮಾತನಾಡಿದ ಅಧ್ಯಕ್ಷ ರೇವಂತ್ ರುಯಾ, ನಾನು ಭಾರತದಲ್ಲಿ ಜನಿಸಿ ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಓದಿದವನು. ನನ್ನ ಜೀವನದ ಅರ್ಧ ಭಾಗವನ್ನು ಇಲ್ಲೇ ಕಳೆದಿದ್ದೇನೆ. ಹೀಗಾಗಿ ಈ ಬೃಹತ್ ಹೂಡಿಕೆ ನನ್ನ ಪಾಲಿಗೆ ತಾಯ್ನಾಡಿಗೆ ಮರಳಿ ಬಂದಷ್ಟೇ ಸಂತೋಷ ಎಂದರು. ಅಲ್ಲದೆ ಅಮೆರಿಕದಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಅಧ್ಯಕ್ಷ ಟ್ರಂಪ್ ಅವರ ನೀತಿಗಳಿಗೆ ಧನ್ಯವಾದ ಅರ್ಪಿಸಿದರು. ಎಸ್ಸಾರ್ ಗ್ರೂಪ್‌ನ ಸ್ಥಾಪಕರಾದ ರವಿ ರುಯಾ ಕೂಡ ಉಪಸ್ಥಿತರಿದ್ದು, ಸಂಸ್ಥೆಯ 5 ದಶಕಗಳ ಸಾಧನೆಯನ್ನು ಹಂಚಿಕೊಂಡರು.

ಇದನ್ನೂ ಓದಿ:

 ಟ್ರಂಪ್ ‘ಟ್ಯಾರಿಫ್ ವಾರ್’ ತಂತ್ರಕ್ಕೆ ಸಿಕ್ಕ ದೊಡ್ಡ ಜಯ

ವಿದೇಶಿ ಉಕ್ಕಿನ ಮೇಲೆ ಅಮೆರಿಕ ವಿಧಿಸಿದ್ದ ಶೇಕಡಾ 50 ರಷ್ಟು ಭಾರಿ ಸುಂಕದ ನೀತಿಯೇ ಈ ಬೃಹತ್ ಹೂಡಿಕೆ ಅಮೆರಿಕಕ್ಕೆ ಬರಲು ಪ್ರಮುಖ ಕಾರಣ ಎಂದು ಟ್ರಂಪ್ ಮತ್ತು ಅವರ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸ್ಪಷ್ಟಪಡಿಸಿದ್ದಾರೆ. ಸುಂಕದ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ಭಾರತ ಸೇರಿದಂತೆ ಜಾಗತಿಕ ಸಂಸ್ಥೆಗಳು ಈಗ ಅಮೆರಿಕಕ್ಕೆ ರಫ್ತು ಮಾಡುವ ಬದಲು, ಅಮೆರಿಕದ ನೆಲದೊಳಗೇ ನೇರ ಹೂಡಿಕೆ ಮಾಡಿ ಉತ್ಪಾದನೆ ಮಾಡಲು ಮುಂದಾಗುತ್ತಿವೆ ಎಂಬುದಕ್ಕೆ ಈ ಒಪ್ಪಂದವೇ ಸಾಕ್ಷಿ. ಈ ಬೃಹತ್ ಕಾರ್ಖಾನೆಯು 2030ರ ವೇಳೆಗೆ ಉತ್ಪಾದನೆಯನ್ನು ಆರಂಭಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

Must Read