July 29, 2026
Wednesday, July 29, 2026
spot_img

ಒಣಗುತ್ತಿರುವ ಬೆಳೆಗಳು, ಕಣ್ಣೀರಿಡುತ್ತಿರುವ ರೈತರು: ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ

ಹೊಸದಿಗಂತ ವರದಿ ಚಿತ್ರದುರ್ಗ:

ರಾಜ್ಯದಲ್ಲಿ ಮಳೆಯಾಗದೆ ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದರೂ, ಸರ್ಕಾರ ಇದುವರೆಗೆ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ದೂರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ರೈತರ ಜಮೀನುಗಳಲ್ಲಿ ಬೆಳೇಗಳು ಒಣಗಿಹೋಗಿವೆ. ಆದರೆ ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಭೀಕರ ಅಭಾವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಇದುವರೆಗೂ ಬರಗಾಲ ಎಂದು ಘೋಷಣೆ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದರು.

 ಹಿಂದಿನ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ನಿಯಮಗಳಿಗಿಂತ ದುಪ್ಪಟ್ಟು ಅಂದರೆ ೮,೦೦೦ ರೂಪಾಯಿ ಇದ್ದ ಪರಿಹಾರವನ್ನು ೧೩,೦೦೦ ರೂಪಾಯಿಗೆ ಹೆಚ್ಚಿಸಿ ತಕ್ಷಣವೇ ವಿತರಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರವು ಬರ ಘೋಷಣೆ ಮಾಡದೆ ಕೇಂದ್ರ ಸರ್ಕಾರಕ್ಕೆ ೧೦,೦೦೦ ಕೋಟಿ ರೂಪಾಯಿ ಅನುದಾನ ನೀಡುವಂತೆ ಕೇಳುತ್ತಿರುವುದು ಯಾವ ಕಾನೂನಿನಡಿಯಲ್ಲಿದೆ ಎಂದು ಪ್ರಶ್ನಿಸಿದರು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕೇಂದ್ರದಿಂದ ಬರುವ ಎಸ್‌ಡಿಆರ್‌ಎಫ್ ಹಣಕ್ಕೆ ರಾಜ್ಯ ಸರ್ಕಾರದ ಪಾಲನ್ನು (ಮ್ಯಾಚಿಂಗ್ ಗ್ರಾಂಟ್) ಸೇರಿಸಿ ರೈತರಿಗೆ ವಿತರಿಸಲು ಸರ್ಕಾರಕ್ಕೆ ಏನು ತೊಂದರೆ ಎಂದು ವಾಗ್ದಾಳಿ ನಡೆಸಿದರು.

ಅತ್ಯಂತ ಹೆಚ್ಚು ಬರಗಾಲ ಎದುರಿಸಿದ ಪ್ರದೇಶಗಳಲ್ಲಿ ಚಿತ್ರದುರ್ಗ ಎರಡನೇ ಸ್ಥಾನದಲ್ಲಿದೆ. ಶೇಕಡಾ ೮೧ ರಷ್ಟು ಜಮೀನಿನಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತನೆಯಾದ ಒಂದಿಷ್ಟು ಬೆಳೆಯೂ ಮಳೆಯಿಲ್ಲದೆ ನಾಶವಾಗಿದೆ. ಹೀಗಿದ್ದರೂ ಸರ್ಕಾರ ಬರ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಎಸ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾಗುತ್ತಿದ್ದರೂ ರಾಜ್ಯ ಸರ್ಕಾರ ತನ್ನ ಪಾಲಿನ ಮ್ಯಾಚಿಂಗ್ ಗ್ರಾಂಟ್ ಸೇರಿಸಿ ರೈತರಿಗೆ ಏಕೆ ಹಂಚಿಲ್ಲ ಎಂದು ಪ್ರಶ್ನಿಸಿದ ಅವರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ತಕ್ಷಣವೇ ‘ಬರಗಾಲ’ ಎಂದು ಘೋಷಿಸಬೇಕು ಎಂದರು.

ಇದನ್ನೂ ಓದಿ;

ತಮ್ಮ ನೇತೃತ್ವದ ತಂಡವು ಎರಡು ದಿನಗಳ ಕಾಲ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಈಗಾಗಲೇ ಪ್ರಥಮ ಹಂತದಲ್ಲಿ ಮೈಸೂರು, ಕೆಆರ್‌ಎಸ್ ಹಾಗೂ ಮಂಡ್ಯ ಜಿಲ್ಲೆಗಳ ಒಣಗುತ್ತಿರುವ ಕಬ್ಬಿನ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು ಎರಡನೇ ಹಂತದ ಅಧ್ಯಯನದ ಭಾಗವಾಗಿ ಹಿರಿಯೂರು ತಾಲೂಕಿನ ಸೋರಗೊಂಡನಹಳ್ಳಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು. ೧೩ ಎಕರೆ ಕಪ್ಪು ನೆಲದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿ ೫೫ ದಿನಗಳಾಗಿದ್ದರೂ ಮಳೆಯಿಲ್ಲದೆ ಬೆಳೆ ಒಣಗಿ ಹೋಗಿದೆ. ಮಳೆ ಬಂದರೂ ಬೆಳೆ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಕಣ್ಣೀರಿಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಶಾಸಕರುಗಳಾದ ಭೃರತಿ ಬಸವರಾಜು, ಹರೀಶ್, ಕೃಷ್ಣನಾಯಕ್, ಚಂದ್ರ ಲಮಾಣಿ, ವಿಧಾನ ಪರಿಷತ್ಸ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರುಗಳಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ರಾಜೇಶ್ ಬುರುಡೆಕಟ್ಟೆ, ಜಗದೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !