ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ನೋಯ್ಡಾ ಮೂಲದ ರಕ್ಷಣಾ ತಂತ್ರಜ್ಞಾನ ಸಂಸ್ಥೆ ಐಜಿ ಡಿಫೆನ್ಸ್ ಅಭಿವೃದ್ಧಿಪಡಿಸಿರುವ ‘ಕೆಎಎಲ್’ ದೀರ್ಘ ವ್ಯಾಪ್ತಿಯ ಒನ್-ವೇ ಅಟ್ಯಾಕ್ ಡ್ರೋನ್‌ನ ಹಾರಾಟ ಪರೀಕ್ಷೆ ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ.
ವಾಹನದ ಮೇಲೆ ಅಳವಡಿಸಲಾಗಿದ್ದ ಉಡಾವಣಾ ವ್ಯವಸ್ಥೆಯಿಂದ ಡ್ರೋನ್ ಅನ್ನು ಪರೀಕ್ಷಾರ್ಥ ಹಾರಿಸಲಾಗಿದ್ದು, ಹಲವು ಪ್ರಮುಖ ವ್ಯವಸ್ಥೆಗಳ ಸಮಗ್ರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಗಿದೆ.
ಪರೀಕ್ಷೆಯ ವೇಳೆ ಡ್ರೋನ್‌ನ ಏರ್‌ಫ್ರೇಮ್, ಪ್ರೊಪಲ್ಷನ್, ಏವಿಯಾನಿಕ್ಸ್, ನ್ಯಾವಿಗೇಷನ್ ಹಾಗೂ ಮಿಷನ್ ವ್ಯವಸ್ಥೆಗಳು ಪರಸ್ಪರ ಸಮನ್ವಯದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪರಿಶೀಲಿಸಲಾಯಿತು. ಆದರೆ ಈ ನಿರ್ದಿಷ್ಟ ಪರೀಕ್ಷೆಯಲ್ಲಿ ಕೆಎಎಲ್ ಎಷ್ಟು ದೂರ ಹಾರಿತು ಅಥವಾ ಎಷ್ಟು ಸಮಯ ಗಾಳಿಯಲ್ಲಿ ಇತ್ತು ಎಂಬ ವಿವರಗಳನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.
ಐಜಿ ಡಿಫೆನ್ಸ್ ಪ್ರಕಾರ, ಕೆಎಎಲ್ ಗರಿಷ್ಠ 1,000 ಕಿ.ಮೀ.ವರೆಗೆ ವ್ಯಾಪ್ತಿ, 7ರಿಂದ 8 ಗಂಟೆಗಳವರೆಗೆ ಹಾರಾಟ ಸಾಮರ್ಥ್ಯ ಹಾಗೂ ಗರಿಷ್ಠ 50 ಕೆ.ಜಿ. ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 5,000 ಮೀಟರ್ ಎತ್ತರದವರೆಗೆ ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಬಹು-ಬ್ಯಾಂಡ್ GNSS ಮತ್ತು ಇನರ್ಷಿಯಲ್ ನ್ಯಾವಿಗೇಷನ್ ವ್ಯವಸ್ಥೆಗಳ ಸಂಯೋಜನೆಯ ಮೂಲಕ ಸ್ವಾಯತ್ತ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ದೀರ್ಘ ವ್ಯಾಪ್ತಿಯ ಒನ್-ವೇ ಅಟ್ಯಾಕ್ ಡ್ರೋನ್‌ಗಳು ಇತ್ತೀಚಿನ ಸಂಘರ್ಷಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಕೆಎಎಲ್ ಪರೀಕ್ಷೆಗೆ ಮಹತ್ವ ಬಂದಿದೆ. ಪೋಖ್ರಾನ್ ಪರೀಕ್ಷೆ ಕೆಎಎಲ್ ಅಭಿವೃದ್ಧಿ ಪಯಣದಲ್ಲಿ ಪ್ರಮುಖ ಹಂತವಾಗಿದ್ದು, ಮುಂದಿನ ಬಳಕೆದಾರ ಪರೀಕ್ಷೆಗಳು ಹಾಗೂ ಅಗತ್ಯ ಅನುಮೋದನೆಗಳ ಬಳಿಕ ಇದರ ಮುಂದಿನ ಹಂತ ನಿರ್ಧಾರವಾಗಲಿದೆ.



