July 29, 2026
Wednesday, July 29, 2026
spot_img

ಬೆಳೆ ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ: ಚಿತ್ರದುರ್ಗ ಎಡಿಸಿ ಕಟ್ಟುನಿಟ್ಟಿನ ಆದೇಶ

ಹೊಸದಿಗಂತ ವರದಿ ಚಿತ್ರದುರ್ಗ

ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಬೆಳೆ ಕಟಾವು ಪ್ರಯೋಗಗಳು ನಡೆಯಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಬೆಳೆ ಸಮೀಕ್ಷೆ ಕಾರ್ಯ ನಿರ್ಲಕ್ಷ್ಯಿಸುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜು ತೋರದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.

೨೦೨೬-೨೭ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮ ಅನುಷ್ಠಾನ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಕೃಷಿ ಇಲಾಖೆ ವಿವಿಧ ಕಾರ್ಯಕ್ರಮಗಳ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳೆ ಸಮೀಕ್ಷೆಯಲ್ಲಿ ಲೋಪದೋಷಗಳಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಬೆಳೆ ಸಮೀಕ್ಷೆಯ ಪಾರದರ್ಶಕತೆ ಮತ್ತು ನಿಖರತೆ ಅತ್ಯಂತ ಮುಖ್ಯ. ಕೃಷಿ, ಕಂದಾಯ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.

ಬೆಳೆ ಸಮೀಕ್ಷೆಯ ಶೇಕಡಾವಾರು ದೋಷಗಳು ಕೆಲವು ಇಲಾಖೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು. ಬೆಳೆ ಸಮೀಕ್ಷೆ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ತಾಕುಗಳಿಗೆ ಭೇಟಿ ನೀಡಿ ಭೌತಿಕವಾಗಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ತಾಲ್ಲೂಕು ಹಂತದಲ್ಲಿ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಬೆಳೆ ಸರ್ವೇ ಕಾರ್ಯದ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು. ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಬೆಳೆ ಸಮೀಕ್ಷೆ ಕುರಿತು ಸಭೆಗಳನ್ನು ಯೋಜಿಸುವ ಮೂಲಕ ಕೆಳ ಹಂತದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು. ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಬೆಳೆ ಸಮೀಕ್ಷೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಕಳೆದ ವರ್ಷದಿಂದ ಕೃತಕ ಬುದ್ಧಿಮತ್ತೆ ಆಧಾರಿತ ವೆರಿಫಿಕೇಶನ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದ್ದು, ರೈತರು ಅಥವಾ ಜಮೀನು ಸಮೀಕ್ಷೆದಾರರು ಅಪ್‌ಲೋಡ್ ಮಾಡುವ ಫೋಟೋಗಳ ನೈಜತೆಯನ್ನು ತಂತ್ರಜ್ಞಾನವೇ ಪರಿಶೀಲಿಸುತ್ತದೆ ಎಂದರು.

 ರೈತರು ನೋಂದಾಯಿತ ಭೂಮಿಯಲ್ಲಿ ಸರಿಯಾದ ಬೆಳೆ ಮಾಹಿತಿ ನೀಡುವುದು ಹಾಗೂ ಜಮೀನಿಗೆ ಭೇಟಿ ನೀಡಿ ನಿಖರ ಫೋಟೋ ತೆಗೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಸ್ಯಾಟಲೈಟ್ ಹಾಗೂ ಸ್ಥಳೀಯ ಜಿಯೋ-ಫೆನ್ಸಿಂಗ್ ವ್ಯವಸ್ಥೆಯ ಮೂಲಕ ಯಾವುದೇ ದುರ್ಬಳಕೆಯಾಗದಂತೆ ತಡೆಯಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ;

ಇದೇ ಸಂದರ್ಭದಲ್ಲಿ ೨೦೨೬-೨೭ನೇ ಸಾಲಿನ ಹತ್ತಿ ಉತ್ಪಾದಕತೆ ಅಭಿಯಾನ, ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪರ್ ಡ್ರಾಪ್ ಮೋರ್ ಕ್ರಾಪ್-ಸೂಕ್ಷ್ಮ ನೀರಾವರಿ, ದ್ವಿದಳ ಧಾನ್ಯಗಳಲ್ಲಿ ಆತ್ಮ ನಿರ್ಭರತಾ ಅಭಿಯಾನದ ಮಾರ್ಗಸೂಚಿಗಳ ಸಭೆ ನಡೆಯಿತು.

ಸಭೆಯಲ್ಲಿ ಉಪ ಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್, ಸಹಾಯಕ ಸಾಂಖ್ಯಿಕ ಅಧಿಕಾರಿ ಅಶ್ವತ್ಥಾಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !