ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ಹಂಚಿಕೆ ಕುರಿತು ಸಿಡಬ್ಲ್ಯೂಆರ್‌ಸಿ ನೀಡಿರುವ ನಿರ್ದೇಶನ ಹಾಗೂ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಮುಂದಿನ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೇಕೆದಾಟು ಯೋಜನೆ ಹಾಗೂ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಅವರು ವಿಧಾನಸೌಧದಲ್ಲಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ವಿಶೇಷ ವಿಮಾನದಲ್ಲಿ ಆಗಮನ – ವೈಮಾನಿಕ ಸಮೀಕ್ಷೆಗೆ ಪ್ಲಾನ್
ಈ ಪ್ರಮುಖ ಚರ್ಚೆಗಾಗಿ ಜೋಸೆಫ್ ವಿಜಯ್ ಅವರಿಗೆ ಪ್ರೈವೇಟ್ ಜೆಟ್ ಸಜ್ಜಾಗಿದೆ. ಅವರೊಂದಿಗೆ ತಮಿಳುನಾಡಿನ ಜಲಸಂಪನ್ಮೂಲ ಸಚಿವ ಎನ್.ಆನಂದ್ ಮತ್ತು ಕೃಷಿ ಸಚಿವ ಆರ್.ವಿನೋದ್ ಆಗಮಿಸುವ ಸಾಧ್ಯತೆಯಿದೆ. ಸಭೆಗಿಂತ ಮುಂಚಿತವಾಗಿ ತಮಿಳುನಾಡು ನಾಯಕರಿಗೆ ಕಾವೇರಿ ಜಲಾನಯನ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು, ವೈಮಾನಿಕ ದರ್ಶನ ಮಾಡಿಸಲು ಡಿಕೆಶಿ ಯೋಜಿಸಿದ್ದಾರೆ.
ತಂಜಾವೂರಿನಲ್ಲಿ ಉದಯನಿಧಿ ಸ್ಟಾಲಿನ್ ಪ್ರತಿಭಟನೆ
ತಮಿಳುನಾಡು ಸಿಎಂ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ ರಾಜಕೀಯ ಕಾವು ಹೆಚ್ಚಾಗಿದೆ. ಆಗಸ್ಟ್ 3 ರಂದು ಬೆಳಿಗ್ಗೆ 10 ಗಂಟೆಗೆ ತಂಜಾವೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಾಜಿ ಸಿಎಂ ಸ್ಟಾಲಿನ್ ಅವರ ಕರೆಯಂತೆ, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ.



