ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಆದೇಶವನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟಿದ್ದು, ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ಆದೇಶ ಹೀಗಿದೆ:
ವಿಶೇಷ ನ್ಯಾಯಾಲಯದ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಮೇಲ್ಮನವಿಯ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಪ್ರಕಟಿಸಿದೆ. ಮೇಲ್ಮನವಿ ಅರ್ಜಿ ಇತ್ಯರ್ಥವಾಗುವವರೆಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ನ್ಯಾಯಾಲಯ ಸಮ್ಮತಿಸಿದೆ.
ಷರತ್ತುಬದ್ಧ ಜಾಮೀನು
ವಿನಯ್ ಕುಲಕರ್ಣಿಗೆ ಜಾಮೀನು ನೀಡುವಾಗ ಹೈಕೋರ್ಟ್ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಒಂದು ಲಕ್ಷ ರೂ. ಮೌಲ್ಯದ ಬಾಂಡ್ ಮತ್ತು ಇಬ್ಬರ ಶೂರಿಟಿ ಒದಗಿಸಬೇಕು. ಪ್ರಕರಣದ ಸಾಕ್ಷಿಗಳಿಗೆ ಯಾವುದೇ ರೀತಿಯಲ್ಲಿ ಹೆದರಿಸುವ ಅಥವಾ ಪ್ರಭಾವ ಬೀರಲು ಯತ್ನಿಸಬಾರದು. ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ ಎಂಬ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ.
ಇದನ್ನೂ ಓದಿ:
ಪ್ರಕರಣದ ಹಿನ್ನೆಲೆ
ಧಾರವಾಡದ ಜಿ.ಪಂ. ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ (CBI) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶದ ವಿರುದ್ಧ ವಿನಯ್ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಹೈಕೋರ್ಟ್‌ನಿಂದ ಜಾಮೀನು ದೊರೆತಿರುವುದರಿಂದ ಜೈಲು ಶಿಕ್ಷೆಯಿಂದ ಪಾರಾಗಿರುವ ವಿನಯ್ ಕುಲಕರ್ಣಿ ಮತ್ತು ಅವರ ಬೆಂಬಲಿಗರು ನಿರಾಳರಾಗಿದ್ದಾರೆ.



