ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಒಕ್ಕೂಟಗಳು ಇಡೀ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಮುಂದಾಗಿವೆ. ಇದರ ಭಾಗವಾಗಿ ಆಗಸ್ಟ್ 13 ರಂದು ‘ಕರ್ನಾಟಕ ಬಂದ್’ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ನಾಯಕರು
ಬೆಂಗಳೂರಿನಲ್ಲಿ ಇಂದು ನಡೆದ ವಿವಿಧ ಕನ್ನಡಪರ ಮತ್ತು ರೈತ ಸಂಘಟನೆಗಳ ಹೈವೋಲ್ಟೇಜ್ ಸಭೆಯಲ್ಲಿ ಬಂದ್ ನಡೆಸುವ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ಕರವೇ ಪ್ರವೀಣ್ ಶೆಟ್ಟಿ, ಶಿವರಾಮೇಗೌಡ, ಹಿರಿಯ ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದು ಮತ್ತು ಕೆ.ಆರ್. ಕುಮಾರ್ ಕೈ ಕೈ ಹಿಡಿದು ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸಿದರು. ಆಗಸ್ಟ್ 13 ರಂದು ಇಡೀ ಕರ್ನಾಟಕ ಸ್ತಬ್ಧಗೊಳ್ಳಲಿದೆ ಎಂದು ಅವರು ಅಧಿಕೃತವಾಗಿ ಪ್ರಕಟಿಸಿದರು.
ಕನ್ನಡಿಗರೇನು ಕೇಂದ್ರದ ಗುಲಾಮರ?
ಸುದ್ದಿಗೋಷ್ಠಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಏಕಪಕ್ಷೀಯ ನಿಲುವುಗಳ ವಿರುದ್ಧ ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದರು. “ಕಣ್ಣು ಮುಚ್ಚಿಕೊಂಡು ಕೇವಲ ತಮಿಳುನಾಡಿನ ಪರವಾಗಿ ತೀರ್ಪು ನೀಡಲು ನಮಗೆ ಈ ಪ್ರಾಧಿಕಾರ ಬೇಕಾ? ಕನ್ನಡಿಗರೇನು ಕೇಂದ್ರ ಸರ್ಕಾರದ ಗುಲಾಮರೇ? ಭಾರತದ ಭೂಪಟದಲ್ಲಿ ಕರ್ನಾಟಕ ರಾಜ್ಯ ಇಲ್ಲವೇ? ನಮ್ಮ ರಾಜ್ಯದ ಬಗ್ಗೆ ಇಷ್ಟೊಂದು ತಾತ್ಸಾರ ಏಕೆ?” ಎಂದು ಸಾರಾ ಗೋವಿಂದು ಕೇಂದ್ರ ಮತ್ತು ಪ್ರಾಧಿಕಾರದ ವಿರುದ್ಧ ಗುಡುಗಿದರು.
ಇದನ್ನೂ ಓದಿ:
ಆಗಸ್ಟ್ 13 ಕ್ಕೆ ಕಂಪ್ಲೀಟ್ ಲಾಕ್ ಡೌನ್ ಭೀತಿ:
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುತ್ತಿರುವುದಕ್ಕೆ ಕರಾವಳಿ, ಮಲೆನಾಡು ಹಾಗೂ ಹಳೇ ಮೈಸೂರು ಭಾಗದಲ್ಲಿ ಈಗಾಗಲೇ ಆಕ್ರೋಶದ ಕಟ್ಟೆ ಒಡೆದಿದೆ. ಆಗಸ್ಟ್ 13 ರ ಬಂದ್ ಯಶಸ್ವಿಗೊಳಿಸಲು ಸಾರಿಗೆ ಸಂಸ್ಥೆಗಳು, ಹೋಟೆಲ್ ಮಾಲೀಕರ ಸಂಘಗಳು, ಚಿತ್ರರಂಗ ಹಾಗೂ ಆಟೋ-ಕ್ಯಾಬ್ ಚಾಲಕರ ಸಂಘಟನೆಗಳ ಬೆಂಬಲ ಕೋರಲು ಕನ್ನಡ ಒಕ್ಕೂಟ ನಿರ್ಧರಿಸಿದೆ. ಅಲ್ಲಿಯವರೆಗೆ ನಿರಂತರವಾಗಿ ಕಾವೇರಿ ಕೊಳ್ಳದ ಜಲಾಶಯಗಳ ಬಳಿ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ನಾಯಕರು ಎಚ್ಚರಿಕೆ ನೀಡಿದ್ದಾರೆ.



