September 23, 2026
Wednesday, September 23, 2026
spot_img

ಹುರುನ್ ರಿಚ್ ಲಿಸ್ಟ್ 2026: ಭಾರತದ ಕುಬೇರರ ಪಟ್ಟಿಯಲ್ಲಿ ಅದಾನಿಗೆ ಪ್ರಥಮ ಪಟ್ಟ, ಮಿತ್ತಲ್ ಭರ್ಜರಿ ಜಿಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಉದ್ಯಮ ರಂಗದ ದಿಗ್ಗಜರ ನಡುವಿನ ಶ್ರೀಮಂತಿಕೆಯ ಪೈಪೋಟಿಯಲ್ಲಿ ಈ ಬಾರಿ ದೊಡ್ಡ ಬದಲಾವಣೆಯಾಗಿದೆ. ‘M3M ಹುರುನ್ ಇಂಡಿಯಾ ರಿಚ್ ಲಿಸ್ಟ್ 2026’ ವರದಿಯ ಪ್ರಕಾರ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಭಾರತದ ಅತ್ಯಂತ ಶ್ರೀಮಂತ ಕುಟುಂಬವಾಗಿ ಹೊರಹೊಮ್ಮಿದೆ.

ಕಳೆದ ವರುಷಕ್ಕಿಂತ ತಮ್ಮ ಸಂಪತ್ತನ್ನು ಶೇಕಡಾ 13ರಷ್ಟು ಹೆಚ್ಚಿಸಿಕೊಂಡಿರುವ ಗೌತಮ್ ಅದಾನಿ ಕುಟುಂಬವು, ಬರೋಬ್ಬರಿ 9.23 ಲಕ್ಷ ಕೋಟಿ ರೂಪಾಯಿಗಳ ನಿವ್ವಳ ಆಸ್ತಿಯೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇತ್ತ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬದ ಸಂಪತ್ತಿನಲ್ಲಿ ಶೇಕಡಾ 10ರಷ್ಟು ಇಳಿಕೆಯಾಗಿದ್ದು, 8.64 ಲಕ್ಷ ಕೋಟಿ ರೂಪಾಯಿ ನಿವ್ವಳ ಆಸ್ತಿಯೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ.

ಮಿತ್ತಲ್ ಜಿಗಿತ

ಈ ಬಾರಿಯ ವರದಿಯಲ್ಲಿ ಅತ್ಯಂತ ಕುತೂಹಲಕಾರಿ ಬೆಳವಣಿಗೆಯೆಂದರೆ ಆರ್ಸೆಲರ್‌ ಮಿತ್ತಲ್ ಸಂಸ್ಥೆಯ ಎಲ್.ಎನ್. ಮಿತ್ತಲ್ ಕುಟುಂಬದ ಸಾಧನೆ. ತಮ್ಮ ಒಟ್ಟು ಸಂಪತ್ತಿನಲ್ಲಿ ಶೇಕಡಾ 93ರಷ್ಟು ಭಾರಿ ಏರಿಕೆ ಕಾಣುವ ಮೂಲಕ ಮಿತ್ತಲ್ ಕುಟುಂಬವು ಎಂಟು ಸ್ಥಾನಗಳನ್ನು ಜಿಗಿದು, 3.40 ಲಕ್ಷ ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಯುರೋಪ್‌ನಲ್ಲಿ ಉಕ್ಕಿನ ವ್ಯಾಪಾರದ ಮೇಲಿದ್ದ ಕಠಿಣ ನಿಯಮಗಳು ಹಾಗೂ ಬೆಲೆ ನಿಗದಿ ನೀತಿಗಳು ಮಿತ್ತಲ್ ಅವರ ಆಸ್ತಿ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಹುರುನ್ ವರದಿ ವಿಶ್ಲೇಷಿಸಿದೆ.

M3M ಹುರುನ್ ಇಂಡಿಯಾ ರಿಚ್ ಲಿಸ್ಟ್ 2026ರ ವರದಿಯು ಭಾರತದ ಆರ್ಥಿಕತೆಯ ಬಲವಾದ ಬೆಳವಣಿಗೆಗೆ ಕನ್ನಡಿ ಹಿಡಿದಿದೆ. ಈ ಬಾರಿ 1,000 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿರುವ ಬರೋಬ್ಬರಿ 1,810 ಜನರು ಈ ಪಟ್ಟಿಯಲ್ಲಿ ಜಾಗ ಪಡೆದಿದ್ದಾರೆ. ಈ ಎಲ್ಲಾ ಕುಬೇರರ ಒಟ್ಟು ಸಂಪತ್ತು ವರುಷದಿಂದ ವರುಷಕ್ಕೆ ಶೇಕಡಾ 12.8ರಷ್ಟು ಏರಿಕೆಯಾಗಿದ್ದು, ಪ್ರಸ್ತುತ 187.5 ಲಕ್ಷ ಕೋಟಿ ರೂಪಾಯಿ ತಲುಪಿದೆ ಎಂದು ವರದಿ ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !