ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾವೇರಿ ಕಿಚ್ಚು ತಾರಕಕ್ಕೇರಿದ್ದು, ಸಿಎಂ ಡಿ.ಕೆ. ಶಿವಕುಮಾರ್ ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಲ್ಲರೂ ಶಾಂತವಾಗಿ ಇರಿ ಎಂದು ಮನವಿ ಮಾಡಿದ್ದಾರೆ. ಆಗಸ್ಟ್ ಮೂರರಂದು ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಭೇಟಿ ನೀಡಿ ಮಾತುಕತೆ ನಡೆಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ರಾಜ್ಯದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಈ ಸಮಯದಲ್ಲಿ ವಿಜಯ್ ಬೆಂಗಳೂರಿಗೆ ಬರುವುದನ್ನು ಪೋಸ್ಟ್‌ಪೋನ್ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಇತ್ತ ತಮಿಳುನಾಡಿನ ಡೆಲ್ಟಾ ಭಾಗದ ರೈತರು ನಮ್ಮ ಭತ್ತದ ಬೆಳೆ ಒಣಗಿಹೋಗಿದೆ. ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿಗೆ ಬಂದು ನಮ್ಮ ಪರಿಸ್ಥಿತಿಯನ್ನೂ ನೋಡಬೇಕು ಎಂದು ಮನವಿ ಮಾಡಿದ್ದಾರೆ. ಆಗಸ್ಟ್ 3 ರಂದು ಸಿಎಂ ವಿಜಯ್ ಅವರು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ರಾಜ್ಯದ ಅಣೆಕಟ್ಟುಗಳ ವೈಮಾನಿಕ ಸಮೀಕ್ಷೆಗೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಕಾವೇರಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪಿ ಆರ್ ಪಾಂಡಿಯನ್ ಹೇಳಿದ್ದಾರೆ. ಈ ಭೇಟಿ ಪೋಸ್ಟ್‌ಪೋನ್ ಆಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ. ಅಲ್ಲದೆ ಡಿಕೆ ಶಿವಕುಮಾರ್ ಅವರು ಸಹ ಡೆಲ್ಟಾ ಜಿಲ್ಲೆಗಳ ಸಮೀಕ್ಷೆಗಾಗಿ ತಮಿಳುನಾಡಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ತಮಿಳುನಾಡಿಗೆ ಭೇಟಿ ನೀಡಿ, ಒಣಗಿಹೋದ ನಮ್ಮ ಕುರುವೈ ಭತ್ತದ ಬೆಳೆಗೆ ಆಗಿರುವ ನೈಜ- ಹಾನಿಯನ್ನು ವೈಯಕ್ತಿಕವಾಗಿ ಪರಿಶೀಲಿಸಬೇಕು ಎಂದು ಪಾಂಡಿಯನ್ ಸುದ್ದಿಗಾರರಿಗೆ ತಿಳಿಸಿದರು.



