ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಹಲವೆಡೆ ಭೂಕುಸಿತ ಮತ್ತು ಹಠಾತ್ ಪ್ರವಾಹ ಸಂಭವಿಸಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
122 ರಸ್ತೆಗಳು ಬಂದ್, ಸೇವೆಗಳಿಗೂ ಹೊಡೆತ
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿ ಪ್ರಕಾರ, ಭಾರೀ ಮಳೆಯಿಂದ 122 ರಸ್ತೆಗಳು ಸಂಚಾರಕ್ಕೆ ಬಂದ್ ಆಗಿವೆ. ಜೊತೆಗೆ 31 ಕುಡಿಯುವ ನೀರು ಸರಬರಾಜು ಯೋಜನೆಗಳು ಮತ್ತು 19 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಕಾರ್ಯನಿರ್ವಹಣೆ ಸ್ಥಗಿತಗೊಂಡಿವೆ. ಮಂಡಿ ಜಿಲ್ಲೆಯಲ್ಲಿ ಅತಿ ಹೆಚ್ಚು 54 ರಸ್ತೆಗಳು ಬಂದ್ ಆಗಿದ್ದು, ಕುಲ್ಲು, ಚಂಬಾ, ಶಿಮ್ಲಾ, ಕಾಂಗ್ರಾ, ಸಿರ್ಮೌರ್ ಹಾಗೂ ಊನಾ ಜಿಲ್ಲೆಗಳಲ್ಲೂ ರಸ್ತೆ ಸಂಪರ್ಕಕ್ಕೆ ತೊಂದರೆಯಾಗಿದೆ.
ಇದನ್ನೂ ಓದಿ:
ಆಗಸ್ಟ್ 6ರವರೆಗೆ ಎಚ್ಚರಿಕೆ
ಕಳೆದ 24 ಗಂಟೆಗಳಲ್ಲಿ ಧರ್ಮಶಾಲಾದಲ್ಲಿ ಅತ್ಯಧಿಕ 149.2 ಮಿ.ಮೀ. ಮಳೆ ದಾಖಲಾಗಿದ್ದು, ಹಲವು ಪ್ರದೇಶಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆ ಸುರಿದಿದೆ. ಹವಾಮಾನ ಇಲಾಖೆ ಆಗಸ್ಟ್ 6ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಭೂಕುಸಿತ, ಪ್ರವಾಹ ಹಾಗೂ ಸಂಚಾರ ಅಡಚಣೆ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.



