August 2, 2026
Sunday, August 2, 2026
spot_img

ಮಳೆರಾಯನ ರೌದ್ರನರ್ತನ: ಮನೆ ಮೇಲೆ ಗುಡ್ಡ ಕುಸಿದು ಮಗು ಸೇರಿ ಮೂವರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ತಮ್ಮಡಿಕೊಪ್ಪ ಕೆರೆ ಬಳಿ ಭಾರೀ ಮಳೆಯಿಂದಾಗಿ ಭೀಕರ ದುರಂತವೊಂದು ಸಂಭವಿಸಿದೆ. ತಡರಾತ್ರಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ, ನಾಲ್ಕು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮಣ್ಣಿನಡಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ.‌

ಮಲಗಿದ್ದಾಗಲೇ ಬಂದೆರಗಿದ ಜವರಾಯ:

ಮಲ್ಲಿಕಾರ್ಜುನ (30), ಅವರ ಪತ್ನಿ ನಾಗವೇಣಿ (25) ಹಾಗೂ ದಂಪತಿಯ ನಾಲ್ಕು ವರ್ಷದ ಮುಗ್ಧ ಮಗ ಸಂತೋಷ್ ಮೃತಪಟ್ಟ ದುರ್ದೈವಿಗಳು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಗುಡ್ಡದ ಮಣ್ಣು ಸಡಿಲಗೊಂಡಿತ್ತು. ತಡರಾತ್ರಿ ಕುಟುಂಬಸ್ಥರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಗುಡ್ಡದ ಬೃಹತ್ ಮಣ್ಣಿನ ರಾಶಿ ತಟ್ಟನೆ ಮನೆ ಮೇಲೆ ಕುಸಿದು ಬಿದ್ದಿದೆ. ಇದರ ಪರಿಣಾಮ ಇಡೀ ಮನೆ ನೆಲಸಮಗೊಂಡಿದ್ದು, ಮೂವರೂ ಸ್ಥಳದಲ್ಲೇ ಜೀವಂತ ಸಮಾಧಿಯಾಗಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಹನುಮಂತ:

ಗುಡ್ಡ ಕುಸಿತದ ಭೀಕರ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಹನುಮಂತ ಎಂಬವರನ್ನು ರಕ್ಷಣಾ ತಂಡವು ರಕ್ಷಿಸಿದೆ. ಅದೃಷ್ಟವಶಾತ್ ಹನುಮಂತ ಕಾಲು ಮಾತ್ರ ಮಣ್ಣು ಹಾಗೂ ಅವಶೇಷಗಳ ಅಡಿ ಸಿಲುಕಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಹೊರಗೆ ತೆಗೆದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ:

ಮಳೆಯ ಮಧ್ಯೆಯೇ ಮುಂದುವರಿದ ಕಾರ್ಯಾಚರಣೆ:

ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ರಕ್ಷಣಾ ಪಡೆಗಳು ಧಾವಿಸಿದ್ದು, ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆಯುಂಟಾಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !