ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 35 ವರ್ಷಗಳಿಂದ ಮಂಡಳಿಯ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ ನಡೆಸದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ವಿರುದ್ಧ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೂಲ ಅಂದಾಜು ಪರಿಷ್ಕರಣೆಗೆ ಸೂಚನೆ:
ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಪರಮೇಶ್ವರ್, ಒಮ್ಮೆ ಯೋಜನಾ ವರದಿ ಸಿದ್ಧವಾದ ಬಳಿಕ, ಮೂಲ ಅಂದಾಜು ವೆಚ್ಚವನ್ನು ಸೂಕ್ತ ಕಾರಣಗಳೊಂದಿಗೆ ಪರಿಷ್ಕರಿಸಿ ಮಂಡಳಿಯ ಅನುಮೋದನೆ ಪಡೆಯಬೇಕು. ಆ ನಂತರವೇ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ,ಎಂದರು. ಚಿಕ್ಕ ಸಂಗಮದ ಅಭಿವೃದ್ಧಿ ಕಾಮಗಾರಿಗಳಿಗಾಗಿ 24.98 ಕೋಟಿ ರೂ. ಅನುದಾನ ಕೋರಲಾಗಿದ್ದು, ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
480 ಕೋಟಿ ರೂ. ವೆಚ್ಚ, 16 ಸ್ಮಾರಕಗಳ ಅಭಿವೃದ್ಧಿಗೆ ಗಡುವು:
ಕೂಡಲಸಂಗಮ ಅಭಿವೃದ್ಧಿ ಮಂಡಳಿಯನ್ನು 2004 ರಲ್ಲಿ ಸ್ಥಾಪಿಸಲಾಗಿದ್ದರೂ,2023 ರವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಚಿವ ಸಂಪುಟವು 744 ಕೋಟಿ ರೂ. ಅನುಮೋದನೆ ನೀಡಿದ್ದು, ಅದರಲ್ಲಿ ಈಗಾಗಲೇ 480 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಾಕಿ ಇರುವ 17 ಸ್ಮಾರಕಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಂಟಿ ನಿರ್ದೇಶನ ನೀಡಿದರು.
ಬೀದರ್ ಜಿಲ್ಲಾಧಿಕಾರಿಗೆ ಕಡಕ್ ವಾರ್ನಿಂಗ್:
ಮುಖ್ಯಮಂತ್ರಿಗಳೊಂದಿಗೆ ತಾವು ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಡಿಸಿಎಂ, ಅಂದು ಅಧಿಕಾರಿಗಳು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮತ್ತೆ ಹೆಚ್ಚಿನ ಸಮಯ ಕೇಳುತ್ತಿರುವುದು ಒಪ್ಪಲು ಸಾಧ್ಯವಿಲ್ಲ. ಎಲ್ಲಾ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಬೀದರ್ ಜಿಲ್ಲಾಧಿಕಾರಿಗೆ ಖಡಕ್ ಆಗಿ ಹೇಳಿದರು.
ಇದನ್ನೂ ಓದಿ:
ಅನುಮೋದನೆ ಇಲ್ಲದೆ 2.18 ಕೋಟಿ ರೂ. ಖರ್ಚು!
ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ್, ಮಂಡಳಿಯ ಪೂರ್ವಾನುಮೋದನೆ ಇಲ್ಲದೆ 2.18 ಕೋಟಿ ರೂ.ಗಳನ್ನು ಹೇಗೆ ಖರ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಖರ್ಚು ಮಾಡಲಾದ ಹಣದ ಸಂಪೂರ್ಣ ವಿವರಗಳನ್ನು ತಕ್ಷಣವೇ ಸಲ್ಲಿಸುವಂತೆ ಮತ್ತು ಭವಿಷ್ಯದಲ್ಲಿ ಕೈಗೆತ್ತಿಕೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಯನ್ನು ಮಂಡಿಸುವಂತೆ ಪ್ರಾಧಿಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದರು.



