October 5, 2026
Monday, October 5, 2026
spot_img

ಭದ್ರಾವತಿಯಲ್ಲಿ VISL ಅಧಿಕಾರಿಯ ಆತ್ಮಹ*ತ್ಯೆ: ಕಾರಣ ನಿಗೂಢ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಶ್ವೇಶ್ವರಯ್ಯ ಐರನ್ ಆ್ಯಂಡ್ ಸ್ಟೀಲ್ ಪ್ಲಾಂಟ್‌ (VISL)ನಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 51 ವರ್ಷದ ಗೋವಿಂದರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

VISL ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿರುವ ಅವರ ನಿವಾಸದಲ್ಲಿ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಹೆಂಡತಿ ಮಕ್ಕಳನ್ನು ಸೇಲಂಗೆ ಕಳುಹಿಸಿದ್ದ ಅಧಿಕಾರಿ

ತಮಿಳುನಾಡಿನ ಸೇಲಂ ಮೂಲದ ಗೋವಿಂದರಾಜ್ ಅವರು ಕಳೆದ 13 ವರ್ಷಗಳಿಂದ VISLನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಸೇಲಂಗೆ ಕಳುಹಿಸಿದ್ದ ಅವರು, ಬಳಿಕ ಭದ್ರಾವತಿಯ ಅಧಿಕಾರಿಗಳ ಕ್ವಾರ್ಟರ್ಸ್‌ಗೆ ವಾಪಸ್ ಬಂದಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಅವರ ವೈಯಕ್ತಿಕ ಸಹಾಯಕರು ದೂರವಾಣಿ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಇದನ್ನೂ ಓದಿ:

ಸತತ ಕರೆಗಳಿಗೂ ಸ್ಪಂದಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಸಹಾಯಕರು ಅವರ ನಿವಾಸಕ್ಕೆ ತೆರಳಿ ಪರಿಶೀಲಿಸಿದಾಗ ಗೋವಿಂದರಾಜ್ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಗೋವಿಂದರಾಜ್ ಅವರ ಸಾವಿನ ವಿಷಯವನ್ನು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಸೇಲಂನಲ್ಲಿದ್ದ ಕುಟುಂಬ ಸದಸ್ಯರು ಭದ್ರಾವತಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬಸ್ಥರ ಆಗಮನದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯಲಿವೆ.

ಸಾವಿಗೆ ಕಾರಣ ದೃಢಪಟ್ಟಿಲ್ಲ

ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೋವಿಂದರಾಜ್ ಅವರ ಸಾವಿಗೆ ವೈಯಕ್ತಿಕ ಕಾರಣವೇ, ಕೆಲಸಕ್ಕೆ ಸಂಬಂಧಿಸಿದ ಒತ್ತಡವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ಪೊಲೀಸರು ದೃಢಪಡಿಸಿಲ್ಲ.

Must Read