August 2, 2026
Sunday, August 2, 2026
spot_img

ಡ್ರಗ್ಸ್ ಮಾತ್ರವಲ್ಲ, ಮೊಬೈಲ್ ವ್ಯಸನವೂ ಅಪಾಯಕಾರಿ: ಕೆ.ಎಂ. ಜಾನಕಿ ಎಚ್ಚರಿಕೆ

ಹೊಸದಿಗಂತ ವರದಿ ಬೆಳಗಾವಿ:

ಯುವ ಸಂಪನ್ಮೂಲ ಹೆಚ್ಚು ಹೊಂದಿರುವ ಸಂಪದ್ಭರಿತ ದೇಶ ನಮ್ಮ‌ ಭಾರತ, ಯುವ ಜನರ‌ ಆರೋಗ್ಯ ಹಾಗೂ ಬೌದ್ಧಿಕ ವಿಕಸನದ ಜವಾಬ್ದಾರಿ ಸರಕಾರ ಹಾಗೂ ನಾವೆಲ್ಲ ಹಿರಿಯ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ತಿಳಿಸಿದರು.

ಭಾನುವಾರ ನಗರದ ಮಹಾಂತೇಷ‌ ನಗರ ಬ್ರಹ್ಮಕುಮಾರಿ‌ಸ್ ಜಿಲ್ಲಾ ಕೇಂದ್ರದಲ್ಲಿ ಬ್ರಹ್ಮಕುಮಾರೀಸ್ ಜಾಗತಿಕ‌ ಮುಖ್ಯಸ್ಥರಾದ ಆದರಣೀಯ ದಿ. ದಾದಿ ಪ್ರಕಾಶಮಣಿ ಅವರ 19ನೇ ಪುಣ್ಯತಿಥಿ ನಿಮಿತ್ತವಾಗಿ ನಡೆದ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ‌ ಯುವ ಜನರು ಇಂದು ಅನೇಕ ನಶೆ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಮೊದಲೆಲ್ಲ ಕುಡಿತ, ಗುಟಖಾ ಸೇವನೆ, ಜೂಜು ಆಟ ಸೇರಿದಂತೆ ಅನೇಕ ವ್ಯಸನಗಳು ಇರುತ್ತಿದ್ದವು. ಈಗ ಕಣ್ಣಿಗೆ ಕಾಣದಂತಹ ಡ್ರಗ್ಸ್, ಗಾಂಜಾ, ಚರಸ್ ನಂತಹ ಅಪಾಯಕಾರಿ ಸೇವನೆಗಳಲ್ಲಿ ಬಹುಪಾಲು ಯುವಜನತೆ ಸಿಲುಕಿದ್ದಾರೆ. ನಶೆಗೆ ಈಗ ನಾವೆಲ್ಲ‌ ಹೊಸ‌ ವ್ಯಾಖ್ಯಾನ‌ ಕೊಡುವ ಹಂತದಲ್ಲಿದ್ದೇವೆ. ಯುವ ಜನತೆ ತರತರಹದ ಸಾಮಾಜಿಕ ಮಾಧ್ಯಮಗಳು, ಮೊಬೈಲ್ ಮತ್ತಿತರ ಡಿವೈಸ್ ಗಳ ದಾಸರಾಗಿದ್ದಾರೆ.

ದಿನವೆಲ್ಲ ರೀಲ್ಸ್ ನೋಡುತ್ತ, ಮೊಬೈಲ್ ನೋಡುತ್ತ, ಅಲ್ಲಸಲ್ಲದ ನಂಬಲರ್ಹವಲ್ಲದ ವಿಷಯಗಳನ್ನು ಜಾಲಾಡುತ್ತ, ಆನಲೈನ್ ಗೇಮಿಂಗ್ ಆಡುತ್ತ, ಆನಲೈನ್ ವಂಚನೆಯಂತಹ ಹಲವು ಬಗೆಯ ಅನೈತಿಕ ಚಟುವಟಿಕೆಗಳ ಮೂಲಕ ಹೊಸ ಟಿಜಿಟಲ್ ನಶೆಗಳು ಆರಂಭವಾಗಿವೆ ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯ ಸರಕಾರ ಮತ್ತು ಆಯಾ ಜಿಲ್ಲಾಡಳಿತಗಳು ವಿವಿಧ ಇಲಾಖೆಗಳ‌ ಮೂಲಕ ನಶಾಮುಕ್ತ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿವೆ. ನಾಗರಿಕರು ಮತ್ತು ಯುವ ಸಮೂಹ ಸರಕಾರದೊಂದಿಗೆ ಸಹಕರಿಸಿದರೆ ನಶಾಮುಕ್ತ ಸ್ವಸ್ಥ ಸಮಾಜ‌ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.

ಬಾಗಲಕೋಟೆ ಜಿಲ್ಲಾಧಿಕಾರಿ‌ ಅವರ ಕಾನೂನು ಸಲಹೆಗಾರ ಹಾಗೂ ನಿವೃತ್ತ ನ್ಯಾಯಾಧೀಶ ಡಿ. ವೈ. ಬಸಾಪುರ ಅವರು ಮಾತನಾಡಿ 2003ರಲ್ಲಿ ಸಿಗರೇಟ್ ನಶಾ ಮುಕ್ತ ಮಾಡಲು ವಿಶ್ವಸಂಸ್ಥೆಯ ಆರೋಗ್ಯ ಸಭೆಯಲ್ಲಿ ನಿರ್ಧರಿಸಲಾಯಿತು. 18 ವಯಸ್ಸಿನ ಒಳಗಿನ ಅಪ್ರಾಪ್ತರು ಯಾವುದೇ ಬಗೆಯ ನಶೆ ಮಾಡುವುದು ದಂಡಾರ್ಹ ಅಪರಾಧ. ಸಿಗರೇಟ್, ಗುಟಖಾ, ಸಾರಾಯಿ ಮೇಲೆ ಆರೋಗ್ಯಕ್ಕೆ‌ ಹಾನಿಕರ ಎಂದು ಬರೆದಿರುತ್ತಾರೆ ಆದರೂ ನಾವು ಸೇವಿಸುತ್ತಿದ್ದೇವೆ. ಕಣ್ಣಿದ್ದು ಕಂಡು, ಕಿವಿಯಿದ್ದು ಕೇಳಿ ನಾವು ಅನಾರೋಗ್ಯಕರ‌ ವ್ಯಸನಗಳನ್ನು‌ಮಾಡುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.

ನಶಾ ಪದಾರ್ಥಗಳ ಪೂರೈಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಮಾಫಿಯಾ ನಡೆಯುತ್ತಿದೆ. ಹಣ ಸಂಪಾದನೆಗೆ ಅಕ್ರಮ ದಂಧೆಗಳು ವಿಪರೀತ ನಡೆಯುತ್ತಿದೆ. ಅಂತಾರಾಷ್ಟ್ರೀಯ ಸರಕಾರಗಳು ಇಂತಹ ಮಾಫಿಯಾಗಳನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದು, ಯುವ ಜನತೆ ಜಾಗೃತರಾಗಬೇಕು ಎಂದು‌ ಅನೇಕ‌ ಉದಾಹರಣೆಗಳ ಮೂಲಕ ಕರೆ‌ ನೀಡಿದರು.

ಬೈಲಹೊಂಗಲ ಸಿವಿಲ್ ನ್ಯಾಯಾಧೀಶೆ ಕು. ರೋಹಿಣಿ ಬಸಾಪುರ ಮಾತನಾಡಿ ವರ್ತಮಾನ‌ ಸಮಯದಲ್ಲಿ‌ ಯುವಕ ಯುವತಿಯರು‌ ನಶೆ ಮಾಡುವುದು ಸಾಮಾನ್ಯವಾಗಿದೆ. ಮೆಡಿಕಲ್, ಎಂಜಿನೀಯರಿಂಗ್ ವಿದ್ಯಾರ್ಥಿ ನಿಲಯಗಳಲ್ಲಿ ಇದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕ ಯುವತಿಯರೇ ನಶೆಯಲ್ಲಿ ಭಾಗಿಯಾದರೆ ಹೇಗೆ ಎಂದು ಕಳವಳ ವ್ಯಕ್ತಪಡಿಸಿದರು. ನಶೆಯಿಂದ ತಾತ್ಕಾಲಿಕ ಖುಷಿ‌ ಸಿಕ್ಕರೂ ದೂರಗಾಮಿ ಆರೋಗ್ಯ ತೊಂದರೆಗಳಾಗುತ್ತವೆ, ಮಾನಸಿಕ‌ ಅಸಮತೋಲನ ಉಂಟಾಗುತ್ತದೆ. ಇಂದಿನ‌ ಯುವ‌ ಜನತೆ ಪಾಲಕರು ಹಾಗೂ ಹಿರಿಯರ ಮಾರ್ಗದರ್ಶನ‌ ಆಲಿಸುವುದು ಸೂಕ್ತ ಎಂದರು.

ನಗರದ ಖಾಸಗಿ ಆಸ್ಪತ್ರೆಯ ಎಲಬು ಮತ್ತು ಕೀಲು ವಿಭಾಗದ ತಜ್ಞ ವೈದ್ಯ ಡಾ. ಅನಿಲ‌ ಪಾಟೀಲ ಮಾತನಾಡಿ 18 ರಿಂದ‌ 35 ವರ್ಷದೊಳಗಿನ‌ ಯುವಕ ಯುವತಿಯರೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ನನ್ನ ಎರಡು ದಶಕಗಳ ವೈದ್ಯಕೀಯ ಸೇವೆಯ ಅನುಭವದಲ್ಲಿ ಗಮನಸಿದ್ದೇನೆ. ವಾಸ್ತವ ಜೀವನದಲ್ಲಿ ಬದುಕದೇ ಮನೋವಿಕಾರ ಹಾಗೂ ನಶೆಯ ದಾಸರಾಗಿ ಯುವ ಜನತೆ ತಮ್ಮ‌ ಕೈಯಾರೆ ಜೀವನ ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಸಿಗರೇಟ್ ಸೇದುವುದು ಮೊದಲು‌ ಫ್ಯಾಶನ್ ಆಗಿತ್ತು.‌ ಗಂಡಸರ ನಶೆ ಈಗ ಹೆಂಗಸರು ಹಾಗೂ ಮಕ್ಕಳಿಗೂ ವ್ಯಾಪಿಸಿದೆ. ವಿವಿಧ ರೋಗಗಳಿಗೆ ಮೂಲವಾದ ವ್ಯಸನ ತ್ಯಜಿಸಿ‌ ಸಮಾಜ‌ ಕಟ್ಟಲು ಯುವ ಜನತೆಯೇ ಮುಂದೆ ಬರಬೇಕಿದೆ ಎಂದರು.‌

ಬ್ರಹ್ಮಕುಮಾರೀಸ್ ಜಿಲ್ಲಾ ಮುಖ್ಯಸ್ಥೆ ಬಿಕೆ‌ ಅಂಬಿಕಾ ದೀದಿ ಮಾತನಾಡಿ ಮಕ್ಕಳನ್ನು ಸರ್ವಶ್ರೇಷ್ಠ, ಸದೃಢ, ವಿಶ್ವಮಾನವರಾಗಿ ನಾವು‌ ನಿರ್ಮಿಸಬೇಕಿದೆ.‌ ಪ್ರಾಯೋಗಿಕ‌ ಜೀವನಕ್ಕೆ‌ ಅನುಗುಣವಾಗಿ ನಾವು‌ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ ಎಂದರು. ಮಾದಕ ದೃವ್ಯ ವ್ಯಸನದಿಂದ ದೂರ ಇರುವ ಬಗ್ಗೆ ಈ ಸಂದರ್ಭ‌ ಯುವಕರಿಗೆ‌ ಪ್ರಮಾಣವಚನ ಬೋಧಿಸಿದರು.

ಪ್ರಾಸ್ತಾವಿಕವಾಗಿ ಡಾ. ಸಂಗೀತಾ ಬೆಳಗಾವಿಮಠ ಮಾತನಾಡಿದರು. ಬಿಕೆ ಜ್ಯೋತಿ ದೀದಿ ಕಾರ್ಯಕ್ರಮ‌ ನಿರೂಪಿಸಿದರು. ಬುಡಾ ಮಾಜಿ ಅಭಿಯಂತ ಮಹಾಂತೇಷ‌ ಹಿರೇಮಠ, ರಾಜಯೋಗಿನಿ ಬಿಕೆ ಮೀರಾ ದೀದಿ, ಬಿಕೆ ವಿಧ್ಯಾ, ಬಿಕೆ ಮೀನಾಕ್ಷಿ, ಬಿಕೆ‌ ಪ್ರತಿಭಾ, ಬಿಕೆ ಸುಲೋಚನ, ಬಿಕೆ ದೇವಿಕಾ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !