ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತ ಚಿತ್ರರಂಗದ ಬಹುಮುಖ ಪ್ರತಿಭೆ ವಿಜಯ್ ಸೇತುಪತಿ ತಮ್ಮ ಸಿನಿಪಯಣದಲ್ಲಿ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದ್ದರು. ಸಣ್ಣ ಅಥವಾ ದೊಡ್ಡ ಸಿನಿಮಾಗಳಿರಲಿ, ಇನ್ಮುಂದೆ ಯಾವುದೇ ಚಿತ್ರದಲ್ಲೂ ಕೇಮಿಯೋ ಮಾಡುವುದಿಲ್ಲ ಎಂದು ಅವರು ಸ್ವತಃ ನಿಯಮ ರೂಪಿಸಿಕೊಂಡಿದ್ದರು. ಅತಿಥಿ ಪಾತ್ರಗಳು ಪ್ರಚಾರದ ವಸ್ತುವಾಗಿ, ತಮ್ಮ ನಾಯಕ ನಟನೆಯ ಮುಖ್ಯ ಚಿತ್ರಗಳ ಮಾರುಕಟ್ಟೆ ಹಾಗೂ ಬಾಕ್ಸ್ ಆಫೀಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾಳಜಿ ಇದರ ಹಿಂದಿತ್ತು.
ಸೂಪರ್ ಸ್ಟಾರ್ ರಜನಿಕಾಂತ್‌ಗಾಗಿ ನಿಯಮ ಸಡಿಲಿಕೆ!
ಆದರೆ, ಈ ಕಟ್ಟುನಿಟ್ಟಿನ ನಿರ್ಧಾರವನ್ನು ತಲೈವರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರಕ್ಕಾಗಿ ವಿಜಯ್ ಸೇತುಪತಿ ಸಡಿಲಿಸಿದ್ದಾರೆ. ರಜನಿ ಮೇಲಿರುವ ಅಪಾರ ಗೌರವ ಮತ್ತು ಅಭಿಮಾನವೇ ಇದಕ್ಕೆ ಮುಖ್ಯ ಕಾರಣ. ರಜನಿಕಾಂತ್ ಅಭಿನಯದ ಸಿನಿಮಾದ ಪೋಸ್ಟರ್‌ಗಳಲ್ಲಿ ಪ್ರೇಕ್ಷಕರ ಗಮನ ಕೇವಲ ಅವರತ್ತ ಮಾತ್ರವೇ ಇರುತ್ತದೆ. ಹೀಗಾಗಿ, ಸಣ್ಣ ಸಿನಿಮಾಗಳ ಪ್ರಚಾರದಲ್ಲಿ ತಮ್ಮ ಮುಖ ಬಳಸಿಕೊಂಡು ಆಗುವಂತಹ ಸಮಸ್ಯೆಯು ರಜನಿ ಚಿತ್ರದಲ್ಲಿ ಎದುರಾಗುವುದಿಲ್ಲ ಎಂಬ ಸ್ಪಷ್ಟನೆ ಅವರದ್ದಾಗಿದೆ.
‘ಜೈಲರ್ 2’ ತಾರಾಗಣ ಹಾಗೂ ಮುಂಬರುವ ಸಿನಿಮಾಗಳು
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದಲ್ಲಿ ಶಿವರಾಜ್ ಕುಮಾರ್, ಮೋಹನ್‌ಲಾಲ್, ಹೃತಿಕ್ ರೋಷನ್ ಮುಂತಾದ ದೈತ್ಯ ನಟರೂ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ವಿಜಯ್ ಸೇತುಪತಿ ಪ್ರಸ್ತುತ ಮಣಿರತ್ನಂ, ವೆಟ್ರಿಮಾರನ್ (‘ಅರಸನ್’), ಮಿಸ್ಕಿನ್ (‘ಟ್ರೈನ್’) ಹಾಗೂ ಪುರಿ ಜಗನ್ನಾಥ್ ಅವರ ‘ಸ್ಲಂ ಡಾಗ್’ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.



