August 10, 2026
Monday, August 10, 2026
spot_img

ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆ ನೀರು ಬಿಡುಗಡೆ; ರೈತರ ಹಿತ ಕಾಯಲು ಸರ್ಕಾರ ಬದ್ಧ ಎಂದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸರ್ವಪಕ್ಷ ಸಭೆಯ ಬಳಿಕ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ಎರಡರಿಂದ ಮೂರು ಅಡಿ ಕಾಯ್ದುಕೊಂಡು ಭಾನುವಾರ ಮಧ್ಯಾಹ್ನದ ನಂತರ ನೀರನ್ನು ನದಿಗೆ ಹೊರಗೆ ಬಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸುರಕ್ಷತೆಗಾಗಿ ಮಾತ್ರ ನೀರು ಹರಿವು:

ಇದುವರೆಗೆ ನಾವು ಯಾವುದೇ ಜಲಾಶಯದಿಂದ ತಮಿಳುನಾಡಿಗೆ ಅಧಿಕೃತವಾಗಿ ನೀರು ಬಿಟ್ಟಿರಲಿಲ್ಲ. ಆದರೆ ಕಬಿನಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿ ನೀರು ಹರಿಸಲಾಗಿದೆಎಂದು ಸಿಎಂ ತಿಳಿಸಿದರು. ಆರಂಭದಲ್ಲಿ ರಾಜ್ಯದಲ್ಲಿ ಶೇ.35 ರಷ್ಟು ಮಾತ್ರ ಮಳೆ ಕೊರತೆಯಾಗಿತ್ತು. ಆದರೆ ಈಗ ದೇವರ ದಯೆಯಿಂದ ಮಳೆಯಾಗಿ ಪರಿಸ್ಥಿತಿ ಸುಧಾರಿಸಿದೆ. ಪ್ರಸ್ತುತ ಕಬಿನಿಗೆ 24,000 ಕ್ಯೂಸೆಕ್‌, ಕೆಆರ್‌ಎಸ್‌ಗೆ 22,000 ಕ್ಯೂಸೆಕ್‌, ಹೇಮಾವತಿ 12,000 ಕ್ಯೂಸೆಕ್‌ ಹಾಗೂ ಹಾರಂಗಿಗೆ 10,000 ಕ್ಯೂಸೆಕ್‌ ಸೇರಿದಂತೆ ಒಟ್ಟು 67,375 ಕ್ಯೂಸೆಕ್‌ ಒಳಹರಿವು ಇದೆ ಎಂದು ಮಾಹಿತಿ ನೀಡಿದರು.

40 ಟಿಎಂಸಿ ನೀರು ಸಂಗ್ರಹದ ಗುರಿ:

ಕಾವೇರಿ ಕಣಿವೆಯ ರೈತನ ಮಗನಾಗಿ ನಾಡಿನ ಏಳೂವರೆ ಕೋಟಿ ಜನರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಡಿ.ಕೆ. ಶಿವಕುಮಾರ್, ರಾಜ್ಯದ ಕುಡಿಯುವ ನೀರಿನ ಅಭಾವ ತಪ್ಪಿಸಲು ಕನಿಷ್ಠ 40 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದರು. ತಮಿಳುನಾಡು 9 ಟಿಎಂಸಿ ನೀರಿಗಾಗಿ ಪಟ್ಟು ಹಿಡಿದಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ (CWC) ದಿನಕ್ಕೆ 3,500 ಕ್ಯೂಸೆಕ್‌ ನೀರು ಬಿಡಲು ಆದೇಶಿಸಿದೆ. ಈ ಬಗ್ಗೆ ದೆಹಲಿಯ ವಕೀಲರ ತಂಡದೊಂದಿಗೆ ವರ್ಚುವಲ್ ಸಭೆ ನಡೆಸಿ, ಸಂಕಟದ ಸೂತ್ರದಂತೆ ಕಾನೂನು ತಜ್ಞರ ಸಲಹೆ ಪಡೆಯಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ;

ಕರ್ನಾಟಕ ಬಂದ್‌ ಬೇಡ ಒಮ್ಮತದ ತೀರ್ಮಾನ:

ಇದೇ ವೇಳೆ ಬಂದ್ ವಿಚಾರವಾಗಿ ಮಾತನಾಡಿದ ಸಿಎಂ, ಕರ್ನಾಟಕ ಬಂದ್‌ ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಈ ಕುರಿತು ಸರ್ವಪಕ್ಷ ಸಭೆಯಲ್ಲೂ ಒಮ್ಮತದ ತೀರ್ಮಾನವಾಗಿದೆ. ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಬಂದ್‌ಗೆ ಅವಕಾಶ ನೀಡಬಾರದು ಎಂದು ಮನವಿ ಮಾಡುತ್ತೇನೆ ಎಂದರು. ಸರ್ಕಾರವೇ ಈ ಕುರಿತು ಸಂಘಟನೆಗಳೊಂದಿಗೆ ಮಾತುಕತೆ ನಡೆಸಲಿದ್ದು, ರೈತರು ಸರ್ಕಾರ ಸೂಕ್ತ ಮಾರ್ಗದರ್ಶನ ನೀಡುವವರೆಗೆ ತಾಳ್ಮೆಯಿಂದ ಇರಬೇಕು ಎಂದು ವಿನಂತಿಸಿದರು. ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಲಹೆಯಂತೆ ಅವರ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಸರ್ಕಾರದ ತೀರ್ಮಾನಕ್ಕೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !