August 2, 2026
Sunday, August 2, 2026
spot_img

1.40 ಕೋಟಿ ರೂ ವೆಚ್ಚದ ರಸ್ತೆ-ಚರಂಡಿ ಕಾಮಗಾರಿಗಳಿಗೆ ಚಾಲನೆ: ಗುಣಮಟ್ಟದಲ್ಲಿ ರಾಜಿ ಬೇಡ ಎಂದ ಶಾಸಕ ಪಪ್ಪಿ

ಹೊಸದಿಗಂತ ವರದಿ ಚಿತ್ರದುರ್ಗ:

ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಗುತ್ತಿಗೆದಾರರು ಸರ್ಕಾರದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಾಕೀತು ಮಾಡಿದರು.

ಇಲ್ಲಿಗೆ ಸಮೀಪದ ಮದಕರಿಪುರ ಮತ್ತು ನಗರದ ಅಮೃತ ಆಯುರ್ವೇದಿಕ್ ಕಾಲೇಜು ಬಳಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳ ಮೂಲಕ ಅನುದಾನ ಬಿಡುಗಡೆ ಮಾಡುತ್ತಿದೆ. ಜನರಿಗೆ ಶಾಶ್ವತ ಹಾಗೂ ಗುಣಮಟ್ಟದ ಸೌಲಭ್ಯ ಕಲ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಚಿತ್ರದುರ್ಗ ನಗರದ ಜಿಲ್ಲಾ ಪಂಚಾತಿ ಕಚೇರಿ ತಿರುವಿನಿಂದ ಅಮೃತ ಆಯುರ್ವೇದ ಕಾಲೇಜುವರೆಗೆ ಸುಮಾರು ೭೦ ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಹಲವು ವರ್ಷಗಳಿಂದ ಗುಂಡಿಗಳು, ಧೂಳು ಹಾಗೂ ಮಳೆಗಾಲದ ಕೆಸರಿನಿಂದ ಬಳಲುತ್ತಿದ್ದ ಈ ರಸ್ತೆಗೆ ಈಗ ಶಾಶ್ವತ ಪರಿಹಾರ ಸಿಗಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸುರಕ್ಷಿತ ಸಂಚಾರ ಸಾಧ್ಯವಾಗಲಿದೆ ಎಂದು ತಿಳಿಸಿದರು.

ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣದಿಂದ ಅಪಘಾತಗಳ ಸಾಧ್ಯತೆ ಕಡಿಮೆಯಾಗುವುದರ ಜೊತೆಗೆ ವಾಹನಗಳ ನಿರ್ವಹಣಾ ವೆಚ್ಚವೂ ತಗ್ಗಲಿದೆ ಎಂದು ಹೇಳಿದರು.

ಇದೇ ವೇಳೆ ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ, ಶ್ರೀ ಮಹಾಲಕ್ಷ್ಮೀ ಮಹಾದ್ವಾರದಿಂದ ರಾಜಶೇಖರ ಅವರ ಮನೆವರೆಗೆ (ವಯಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ) ಸುಮಾರು ೭೦ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಯಿತು. ಈ ಕಾಮಗಾರಿ ೨೦೨೪-೨೫ನೇ ಸಾಲಿನ ಮಳೆ ಪರಿಹಾರ (ಈಟooಜ) ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಮದಕರಿಪುರ ಗ್ರಾಮದಲ್ಲಿ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತು ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ “ರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬೇಗ ಹಾಳಾಗುತ್ತಿತ್ತು. ಈಗ ರಸ್ತೆ ಮತ್ತು ಚರಂಡಿಯನ್ನು ಒಟ್ಟಿಗೆ ನಿರ್ಮಿಸುವುದರಿಂದ ಮಳೆನೀರು ಸರಾಗವಾಗಿ ಹರಿದು ರಸ್ತೆ ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಅಭಿವೃದ್ಧಿ ಕಾಮಗಾರಿಗಳ ಯಶಸ್ಸಿಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ. ಜನರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಜಾಗೃತಿಂದ ಗಮನಹರಿಸಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ. ಇಓ ರವಿಕುಮಾರ್, ಕೆಡಿಪಿ ಸಭೆಯ ಸದಸ್ಯರಾದ ಸಂತೋಷ್, ನಾಗರಾಜ್, ಅಮೃತ ಆಯುರ್ವೇದ ಕಾಲೇಜ್ ಕಾರ್ಯದರ್ಶಿ ಭರತ್, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ರೇವಣಸಿದ್ದಪ್ಪ, ರಮೇಶ್, ಕಾಂಗ್ರೆಸ್ ಯುವ ಮುಖಂಡರಾದ ರಾಜೇಶ್ ಮದುರೆ, ಸಮರ್ಥ್, ವಿಕಾಸ್, ಪೃಥ್ವಿ, ಸಂಜಯ್, ಮಲ್ಲಿಕಾರ್ಜುನ್ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !