ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರೋ ವುಮೆನ್ಸ್ ಪ್ರೀಮಿಯರ್ ಲೀಗ್ನ 2027ರ ಆವೃತ್ತಿಗೆ ಇದೀಗ ಅಧಿಕೃತ ದಿನಾಂಕ ನಿಗದಿಯಾಗಿದೆ.
ಐದನೇ ಆವೃತ್ತಿಯ ಟೂರ್ನಿಗೆ ಸಿದ್ಧತೆಗಳು ಆರಂಭವಾಗಿದ್ದು, ಆಟಗಾರ್ತಿಯರ ಹರಾಜು ಹಾಗೂ ಪಂದ್ಯಗಳ ವೇಳಾಪಟ್ಟಿಯನ್ನು WPL ಪ್ರಕಟಿಸಿದೆ. ಇದರೊಂದಿಗೆ ಮುಂದಿನ ಸೀಸನ್ನಲ್ಲಿ ಯಾವ ತಂಡಕ್ಕೆ ಯಾರು ಸೇರ್ಪಡೆಯಾಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.
ಕೇರಳದ ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ
WPL ಪ್ರಕಟಿಸಿರುವ ಮಾಹಿತಿಯಂತೆ, 2027ರ ಹರಾಜು ಪ್ರಕ್ರಿಯೆ ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಹರಾಜಿಗೂ ಮುನ್ನ ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 28ರವರೆಗೆ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ರಿಟೆನ್ಷನ್ ಪ್ರಕ್ರಿಯೆ ಮುಗಿದ ಬಳಿಕ ಯಾವ ಆಟಗಾರ್ತಿಯರು ಹರಾಜಿನ ಅಂಗಳಕ್ಕೆ ಬರಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:
ಜನವರಿ 14ರಿಂದ WPL ಶುರು
ಇನ್ನು 2027ರ WPL ಪಂದ್ಯಗಳು ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿವೆ. ಸುಮಾರು ಮೂರು ವಾರಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ದೇಶ-ವಿದೇಶಗಳ ಪ್ರಮುಖ ಆಟಗಾರ್ತಿಯರು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.
2026ರ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿತ್ತು. ಇದರೊಂದಿಗೆ RCB ತನ್ನ ಎರಡನೇ WPL ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಒಂದೆಡೆ ಹಾಲಿ ಚಾಂಪಿಯನ್ RCB ಮತ್ತೊಮ್ಮೆ ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯಲ್ಲಿದ್ದರೆ, ಉಳಿದ ತಂಡಗಳು ಹೊಸ ಆಟಗಾರ್ತಿಯರ ಸೇರ್ಪಡೆಯೊಂದಿಗೆ ಬಲಿಷ್ಠ ಸಂಯೋಜನೆ ರೂಪಿಸಲು ಸಜ್ಜಾಗಲಿವೆ. ಅಕ್ಟೋಬರ್ 28ರ ಹರಾಜಿನ ಬಳಿಕ WPL 2027ರ ಪ್ರಶಸ್ತಿ ಕದನದ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದ್ದು, ಜನವರಿಯಿಂದ ಕ್ರಿಕೆಟ್ ಅಂಗಳದಲ್ಲಿ ಮಹಿಳಾ ಕ್ರಿಕೆಟ್ನ ಮತ್ತೊಂದು ರೋಚಕ ಅಧ್ಯಾಯ ಶುರುವಾಗಲಿದೆ.



