ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಗ್ಲ್ಯಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಮಕ್ತಾಯದೊಂದಿಗೆ, 2030ರ ಮುಂದಿನ ಆವೃತ್ತಿಯ ಆತಿಥ್ಯದ ಜವಾಬ್ದಾರಿಯನ್ನು ಭಾರತ ಅಧಿಕೃತವಾಗಿ ಸ್ವೀಕರಿಸಿದೆ. ಸ್ಕಾಟ್ಲ್ಯಾಂಡ್ ಅಧಿಕಾರಿಗಳು ಸಿಜಿಎಫ್ ಧ್ವಜವನ್ನು ನೀರಜ್ ಚೋಪ್ರಾ, ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಹರ್ಷ್ ಸಂಘವಿ ಅವರಿಗೆ ಹಸ್ತಾಂತರಿಸಿದರು. ಇದರೊಂದಿಗೆ ಗುಜರಾತ್ನ ಅಹಮದಾಬಾದ್ನಲ್ಲಿ ಮುಂದಿನ ಕ್ರೀಡಾಕೂಟ ನಡೆಯುವುದು ಖಚಿತವಾಗಿದೆ.

100 ವರ್ಷಗಳ ಐತಿಹಾಸಿಕ ಮೈಲಿಗಲ್ಲು
1930ರಲ್ಲಿ ಕೆನಡಾದಲ್ಲಿ ಆರಂಭವಾದ ಈ ಕೂಟಕ್ಕೆ 2030ರ ವೇಳೆಗೆ ಶತಮಾನದ ಸಂಭ್ರಮ ತುಂಬಲಿದೆ. 2010ರ ದೆಹಲಿ ಆವೃತ್ತಿಯ ನಂತರ ಭಾರತದಲ್ಲಿ ನಡೆಯುತ್ತಿರುವ 2ನೇ ಕಾಮನ್ವೆಲ್ತ್ ಗೇಮ್ಸ್ ಇದಾಗಿದೆ. ಗ್ಲ್ಯಾಸ್ಗೋದಲ್ಲಿ ಕೇವಲ 10 ಆಟಗಳಿದ್ದವು, ಆದರೆ ಅಹಮದಾಬಾದ್ನಲ್ಲಿ 15 ರಿಂದ 17 ಕ್ರೀಡೆಗಳನ್ನು ಸೇರಿಸಲು ಅನುಮತಿ ಸಿಕ್ಕಿರುವುದು ಕ್ರೀಡಾಪಟುಗಳಲ್ಲಿ ಸಂತಸ ಮೂಡಿಸಿದೆ.
ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿ
ಗ್ಲ್ಯಾಸ್ಗೋ ಸ್ಟೇಡಿಯಂನಲ್ಲಿ ಶಂಕರ್ ಮಹದೇವನ್, ಮಾನುಷಿ ಛಿಲ್ಲರ್ ಮತ್ತು ರಿಷಭ್ ಶರ್ಮಾ ನೇತೃತ್ವದಲ್ಲಿ ಅದ್ಧೂರಿ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ‘ವಂದೇ ಮಾತರಂ’ ಧ್ವನಿ ಮತ್ತು ‘ವಸುಧೈವ ಕುಟುಂಬಕಂ’ ಸಂದೇಶದೊಂದಿಗೆ ಇಡೀ ವಿಶ್ವವನ್ನು 2030ರ ಕೂಟಕ್ಕೆ ಆಹ್ವಾನಿಸಲಾಯಿತು.



