November 26, 2026
Thursday, November 26, 2026
spot_img

ಭಾರತದಲ್ಲಿ ಪಾಕ್ ಕಂಟೆಂಟ್‌ಗೆ ಬ್ರೇಕ್ ಹಾಕಿ: ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಇದೀಗ ಮನರಂಜನಾ ಜಗತ್ತಿಗೂ ವ್ಯಾಪಿಸಿದೆ. ಪಾಕಿಸ್ತಾನದ ಕಲಾವಿದರು, ಸಿನಿಮಾ ಮತ್ತು ವೆಬ್‌ಸೀರಿಸ್‌ಗಳ ಪ್ರಸಾರದ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.

ಪಾಕಿಸ್ತಾನ ಮೂಲದ ಯಾವುದೇ ಕಂಟೆಂಟ್ ಭಾರತದಲ್ಲಿ ಲಭ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಪಾಕಿಸ್ತಾನದ ಮೊದಲ ನೆಟ್‌ಫ್ಲಿಕ್ಸ್ ಮೂಲ ವೆಬ್‌ಸೀರಿಸ್ ‘ಜೋ ಬಚೇ ಹೈ ಸಾಂಗ್ ಸಮೇಟ್ ಲೋ’ ಸುತ್ತ ವಿವಾದ ತೀವ್ರಗೊಂಡಿದೆ.

2025ರ ಸಲಹೆಯನ್ನು ಪಾಲಿಸುವಂತೆ ಸೂಚನೆ

ಈ ವೆಬ್‌ಸೀರಿಸ್ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಕುರಿತು ಸಚಿವಾಲಯಕ್ಕೆ ಹಲವು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್‌ಗೆ 2025ರ ಮೇ 8ರಂದು ಹೊರಡಿಸಿದ್ದ ಸಲಹೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. ಪಾಕಿಸ್ತಾನ ಮೂಲದ ಕಂಟೆಂಟ್ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಅಂದು ಒಟಿಟಿ ವೇದಿಕೆಗಳಿಗೆ ನಿರ್ದೇಶನ ನೀಡಲಾಗಿತ್ತು. ರಾಷ್ಟ್ರೀಯ ಭದ್ರತೆ, ದೇಶದ ಸಾರ್ವಭೌಮತೆ ಮತ್ತು ವಿದೇಶಿ ಸಂಬಂಧಗಳಿಗೆ ಧಕ್ಕೆಯಾಗುವ ಸಾಧ್ಯತೆಯಿರುವ ಕಂಟೆಂಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಐಟಿ ನಿಯಮಗಳನ್ನೂ ಉಲ್ಲೇಖಿಸಲಾಗಿದೆ.

ನೆಟ್‌ಫ್ಲಿಕ್ಸ್‌ಗೆ ಹಳೆಯ ಭರವಸೆ ನೆನಪಿಸಿದ ಕೇಂದ್ರ

2025ರ ಜೂನ್‌ನಲ್ಲಿ ಭಾರತದಲ್ಲಿ ಪಾಕಿಸ್ತಾನ ಮೂಲದ ಯಾವುದೇ ಸಿನಿಮಾ ಅಥವಾ ಸರಣಿಯನ್ನು ಪ್ರಸಾರ ಮಾಡುತ್ತಿಲ್ಲ ಎಂದು ನೆಟ್‌ಫ್ಲಿಕ್ಸ್ ಸಚಿವಾಲಯಕ್ಕೆ ತಿಳಿಸಿತ್ತು. ಇದೀಗ ಅದೇ ಬದ್ಧತೆಯನ್ನು ಮುಂದುವರಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ:

ಸ್ಟಾರ್ ಕಲಾವಿದರ ವೆಬ್‌ಸೀರಿಸ್ ವಿವಾದ

‘ಜೋ ಬಚೇ ಹೈ ಸಾಂಗ್ ಸಮೇಟ್ ಲೋ’ ಪಾಕಿಸ್ತಾನದ ಲೇಖಕಿ ಫರ್ಹತ್ ಇಶ್ತಿಯಾಕ್ ಅವರ ಜನಪ್ರಿಯ ಕಾದಂಬರಿ ಆಧಾರಿತ ಪ್ರೇಮಕಥೆಯಾಗಿದೆ. ಫವಾದ್ ಖಾನ್, ಮಹಿರಾ ಖಾನ್, ಸನಮ್ ಸಯೀದ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಪಾಕಿಸ್ತಾನ, ಇಟಲಿ ಮತ್ತು ಬ್ರಿಟನ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಸರಣಿ ಡಿಸೆಂಬರ್ 4ರಂದು ಬಿಡುಗಡೆಯಾಗಬೇಕಿದೆ.

ನೆಟ್‌ಫ್ಲಿಕ್ಸ್ ವಿರುದ್ಧ ಸಿನಿಮಾ ಸಂಘಟನೆಯ ಎಚ್ಚರಿಕೆ

ಅಖಿಲ ಭಾರತ ಸಿನಿಮಾ ಕಾರ್ಮಿಕರ ಸಂಘ (AICWA) ಕೂಡ ಈ ಸರಣಿಯನ್ನು ಭಾರತದಲ್ಲಿನ ನೆಟ್‌ಫ್ಲಿಕ್ಸ್ ಕ್ಯಾಟಲಾಗ್‌ನಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ. ಬೇಡಿಕೆ ಈಡೇರದಿದ್ದರೆ ನೆಟ್‌ಫ್ಲಿಕ್ಸ್ ಕಚೇರಿ ಎದುರು ಪ್ರತಿಭಟನೆ ಮತ್ತು ದೇಶಾದ್ಯಂತ ಬಹಿಷ್ಕಾರ ಅಭಿಯಾನ ನಡೆಸುವುದಾಗಿ ಎಚ್ಚರಿಸಿದೆ.

Must Read