ಹೊಸದಿಗಂತ ವರದಿ ಕಲಬುರಗಿ:
ಯಾವುದೇ ಧರ್ಮ ಅಥವಾ ಸಿದ್ಧಾಂತ ಉಳಿಯಬೇಕಾದರೆ ಅದರ ಆಚರಣೆ ಮತ್ತು ಅನುಷ್ಠಾನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿರುವ ಶ್ರೀ ಜಯತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ನಡೆದ ಶ್ರೀ ಜಯತೀರ್ಥರ ಮಧ್ಯಾರಾಧನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಹಿಂದೂ ಧರ್ಮದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಪಾಲಕರು ಮಕ್ಕಳಿಗೆ ಧರ್ಮದ ಆಚರಣೆ, ಸಂಪ್ರದಾಯ ಹಾಗೂ ಸಂಸ್ಕಾರದ ಮಹತ್ವವನ್ನು ತಿಳಿಸಿಕೊಡಬೇಕು. ಉತ್ತಮ ಸಂಸ್ಕಾರಯುತ ಮಕ್ಕಳಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಧರ್ಮದ ಬಗ್ಗೆ ಕೇವಲ ತಿಳುವಳಿಕೆ ಸಾಕಾಗುವುದಿಲ್ಲ, ಅದನ್ನು ಜೀವನದಲ್ಲಿ ಅನುಷ್ಠಾನಗೊಳಿಸುವುದು ಅಗತ್ಯ ಎಂದು ಹೇಳಿದರು.
ಪಂಚಾಮೃತಾಭಿಷೇಕ, ತಪ್ತಮುದ್ರಾಧಾರಣೆ
ಇದಕ್ಕೂ ಮುನ್ನ ಶ್ರೀ ಜಯತೀರ್ಥರ ಮಧ್ಯಾರಾಧನೆ ಅಂಗವಾಗಿ ಮೂಲವೃಂದಾವನ ಸನ್ನಿಧಾನದಲ್ಲಿ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ತಪ್ತಮುದ್ರಾಧಾರಣೆ, ಶ್ರೀಮನ್ನ್ಯಾಯಸುಧಾ ಪಾಠ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗುಜರಾತ್ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.

ಭವ್ಯ ಜೋಡು ರಥೋತ್ಸವ
ಮಧ್ಯಾರಾಧನೆ ಪ್ರಯುಕ್ತ ನಡೆದ ಭವ್ಯ ಜೋಡು ರಥೋತ್ಸವ ವಿಶೇಷ ಆಕರ್ಷಣೆಯಾಗಿತ್ತು. ಟೀಕಾಚಾರ್ಯರ ಪ್ರತಿಮೆ, ಸರ್ವಮೂಲ ಗ್ರಂಥ ಹಾಗೂ ಶ್ರೀಮನ್ನ್ಯಾಯಸುಧಾ ಗ್ರಂಥಗಳನ್ನು ಹೊತ್ತ ರಥಗಳನ್ನು ಶ್ರೀಗಳು ಚಾಲನೆ ನೀಡಿದರು. ಭಕ್ತರು ಭಜನೆ, ದಾಸರ ಪದಗಳ ಗಾಯನದೊಂದಿಗೆ ರಥ ಎಳೆದು ಭಕ್ತಿ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಉತ್ತರಾದಿ ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಂ. ವಿದ್ಯಾಧೀಶಾಚಾರ್ಯ ಗುತ್ತಲ್, ದಿವಾನ ಪಂ. ಶಶಿಧರ ಆಚಾರ್ಯ, ವ್ಯವಸ್ಥಾಪಕ ಪಂ. ವೆಂಕಣ್ಣಾಚಾರ್ಯ ಕೃ. ಪೂಜಾರಿ ಸೇರಿದಂತೆ ಹಲವಾರು ವಿದ್ವಾಂಸರು, ಗಣ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.



