September 18, 2026
Friday, September 18, 2026
spot_img

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ಟಿಎಂಸಿ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದಲ್ಲಿ ಸೃಷ್ಟಿಯಾಗಿದ್ದ ನಾಯಕತ್ವದ ಜಿದ್ದಾಜಿದ್ದಿಗೆ ಭಾರತೀಯ ಚುನಾವಣಾ ಆಯೋಗವು ಬಿಗ್ ಶಾಕ್ ನೀಡಿದೆ. ಮುಂಬರುವ ಪಶ್ಚಿಮ ಬಂಗಾಳದ  ಉಪಚುನಾವಣೆಯಲ್ಲಿ ಟಿಎಂಸಿ ಪಕ್ಷದ ಅಧಿಕೃತ ಹೆಸರು ಮತ್ತು ಅದರ ಚಿಹ್ನೆಯನ್ನು ಬಳಸದಂತೆ ಉಭಯ ಬಣಗಳಿಗೂ ಆಯೋಗವು ತಾತ್ಕಾಲಿಕ ನಿಷೇಧ ಹೇರಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ಬಣ ಮತ್ತು ಹಿರಿಯ ಶಾಸಕ ಅರೂಪ್ ರಾಯ್ ಬೆಂಬಲದೊಂದಿಗೆ ಶಾಸಕ ರಿತಬ್ರತ ಬ್ಯಾನರ್ಜಿ ಮುನ್ನಡೆಸುತ್ತಿರುವ ಬಂಡಾಯ ಬಣದ ನಡುವಿನ ಪೈಪೋಟಿಯ ಹಿನ್ನೆಲೆಯಲ್ಲಿ ಗುರುವಾರ ಈ ಮಹತ್ವದ ತೀರ್ಪು ಹೊರಬಿದ್ದಿದೆ.

ಉಪಚುನಾವಣೆ ಹೊತ್ತಲ್ಲೇ ಬಿಗ್ ಟ್ವಿಸ್ಟ್

ಅ. 6 ರಂದು ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮಮತಾ ಬಣ ಹಾಗೂ ರಿತಬ್ರತ ಬಣದ ಅಭ್ಯರ್ಥಿಗಳು ತಾವೇ ನಿಜವಾದ ಟಿಎಂಸಿ ಎಂದು ಹೇಳಿಕೊಂಡು ಬಿ-ಫಾರಂ ಸಲ್ಲಿಸಿದ್ದರು. ಈ ಗೊಂದಲಕ್ಕೆ ತೆರೆ ಎಳೆದಿರುವ ಚುನಾವಣಾ ಆಯೋಗವು, ಸದ್ಯಕ್ಕೆ ಇಬ್ಬರಿಗೂ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಮೂಲ ಹೆಸರು ಹಾಗೂ ಚಿಹ್ನೆಯನ್ನು ಫ್ರೀಜ್ ಮಾಡಿದೆ. ಉಭಯ ಬಣಗಳು ಇಂದು ಬೆಳಗ್ಗೆ 11 ಗಂಟೆಯೊಳಗೆ ಮೂರು ಆದ್ಯತೆಯ ಹೆಸರುಗಳು ಮತ್ತು ಮೂರು ಚಿಹ್ನೆಗಳ ಪಟ್ಟಿಯನ್ನು ಸಲ್ಲಿಕೆ ಮಾಡಬೇಕು ಎಂದು ಗಡುವು ನೀಡಿದೆ. ಮೂಲ ಪಕ್ಷದ ಹೆಸರನ್ನು ನೆನಪಿಸುವಂತಹ ಸಣ್ಣ ಉಲ್ಲೇಖವನ್ನು ಬಳಸಲು ಆಯೋಗ ಅನುಮತಿ ನೀಡಿದೆ.

ಪಕ್ಷದ ಆತಂರಿಕ ಜಗಳದ ಹಿನ್ನೆಲೆ ಏನು?

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲಿನ ಬಳಿಕ ಪಕ್ಷದೊಳಗೆ ಬಂಡಾಯದ ಕಿಡಿ ಹೊತ್ತಿಕೊಂಡಿತ್ತು. ಮೊದಲ ಬಾರಿಗೆ ಶಾಸಕರಾಗಿದ್ದ ರಿತಬ್ರತ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ, ಅವರು ಒಟ್ಟು 80 ಶಾಸಕರ ಪೈಕಿ 60 ಶಾಸಕರ ಬೆಂಬಲ ತಮಗಿದೆ ಎಂದು ಮಂಡಿಸಿದ್ದರು. ಅಷ್ಟೇ ಅಲ್ಲದೆ ಸ್ಪೀಕರ್ ಅವರಿಂದ ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. 

ಇದನ್ನೂ ಓದಿ:

ಮಮತಾ ಬ್ಯಾನರ್ಜಿ ನಮ್ಮ ನಾಯಕಿ ಹೌದು, ಆದರೆ ಅವರ ಸೋದರಳಿಯ ಹಾಗೂ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಅತಿರೇಕದ ಪ್ರಭಾವಕ್ಕೆ ಬ್ರೇಕ್ ಹಾಕಬೇಕು ಎನ್ನುವುದು ಬಂಡಾಯಗಾರರ ವಾದವಾಗಿತ್ತು. ಜೂನ್ 22ರಂದು ರಿತಬ್ರತ ಬಣವು ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಅರೂಪ್ ರಾಯ್ ಅವರೇ ನಿಜವಾದ ಟಿಎಂಸಿಯ ನಾಯಕ ಎಂದು ಘೋಷಿಸಿಕೊಂಡಿತ್ತು. ಈ ವಿವಾದ ಈಗ ಚುನಾವಣಾ ಆಯೋಗದ ಅಂಗಳ ತಲುಪಿದ್ದು, ಅಂತಿಮ ತೀರ್ಪು ಬರುವವರೆಗೂ ದೀದಿ ಬಣಕ್ಕೂ ಟಿಎಂಸಿ ಹೆಸರಿಲ್ಲದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !