August 3, 2026
Monday, August 3, 2026
spot_img

‘ರೈತರ ಕಷ್ಟ ಸರ್ಕಾರಕ್ಕೆ ಕಾಣುತ್ತಿಲ್ಲ’: ಕಾಂಗ್ರೆಸ್ ವಿರುದ್ಧ ಗಾಲಿ ಜನಾರ್ಧನ ರೆಡ್ಡಿ ಆರೋಪ

ಹೊಸದಿಗಂತ ವರದಿ ಬಳ್ಳಾರಿ:

ಮಳೆ ಕೊರತೆಯಿಂದ ಭೀಕರ ಬರ ಆವರಿಸಿದ್ದು, ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಕಷ್ಟ ಸರ್ಕಾರದ ಕಣ್ಣಿಗೆ ಕಾಣ್ತಿಲ್ಲ, ಸರ್ಕಾರಕ್ಕೆ ಕಿವಿಯು ಇಲ್ಲ, ಕಣ್ಣು ಇಲ್ಲ, ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ವಾಗ್ದಾಳಿ ನಡೆಸಿದರು.

ನಗರದ ಡಿಸಿ ಕಚೇರಿ ಎದುರು, ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯಲ್ಲಿ ಸೋಮವಾರ ರಾತ್ರಿ ಮಾತನಾಡಿದರು.

‘ಬರದಿಂದ ರೈತರು ಸಂಕಷ್ಟದಲ್ಲಿ, ಸರ್ಕಾರಕ್ಕೆ ಕಣ್ಣು-ಕಿವಿ ಇಲ್ಲ’

ಬೆಳಿಗ್ಗೆಯಿಂದ ಬಿಜೆಪಿ ಡಿಸಿ ಕಚೇರಿ ಎದುರೇ ಆಹೋರಾತ್ರಿ ಧರಣಿ ನಡೆಸಿದ್ರೆ, ಇಲ್ಲಿವರೆಗೆ ಯಾವೊಬ್ಬ ಅಧಿಕಾರಿ ಸ್ಥಳಕ್ಕೆ ಬಂದಿಲ್ಲ, ಕೇಳಿಲ್ಲ, ಇದೊಂದು ಕಿವುಡ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇಲ್ಲಿ ಖಾಲಿ ಜಾಗ ಸಿಗುತ್ತೆ ಅಲ್ಲಿ ಬೇಲಿ ಹಾಕುವ ಸರ್ಕಾರವಿದು, ನಮ್ಮ ಭಾಗದ ಜನರ ಸಮಸ್ಯೆ ಸರ್ಕಾರ ಆಲಿಸುತ್ತಿಲ್ಲ, ಕೂಡಲೇ ಸರ್ಕಾರ ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು, ಎಕರೆಗೆ 50 ಸಾವಿರ ಪರಿಹಾರ ನೀಡಬೇಕು, ಗೋಶಾಲೆ ಆರಂಭಿಸಿ, ಮೇವು, ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

‘ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡಿದ್ದು ಹಗರಣ ಮುಚ್ಚಿಹಾಕಲು’

ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತೆ ಸಚಿವರಾಗಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋಟಿ ಹಣ ನಾಗೇಂದ್ರ ಅವರು ನುಂಗಿದ್ದಾರೆ ಅಂದ್ರೂ. ಆದರೆ, ನಾಗೇಂದ್ರ ಒಬ್ಬರೆ ಅದನ್ನು ನುಂಗಿಲ್ಲ, ಸ್ವಲ್ಪು ತಲುಪಿರಬಹುದು. ಉಳಿದಿದ್ದು, ತೆಲಂಗಾಣ, ಗೋವಾ, ಚುನಾವಣೆಗೆ ಬಳಕೆಯಾಗಿದೆ, ಇಡೀ ಹಗರಣದ ಹೊಣೆಯನ್ನು ನಾಗೇಂದ್ರ ಮೇಲೆ ಹೊರಿಸಿದ್ದಾರೆ ಎಂದು ಅಂದೇ ಹೇಳಿದ್ದೆ. ನಾಗೇಂದ್ರಗೆ ಸಚಿವ ಸ್ಥಾನ ನೀಡಿರಲಿಲ್ಲ ಅಂದ್ರೆ ಅವರು ಕೋರ್ಟಗೆ ಹೋಗಿ ಎಲ್ಲವನ್ನೂ ಹೇಳ್ತಿದ್ರು. ಇಡೀ ಸರ್ಕಾರವೇ ಅಲುಗಾಡುತ್ತಿತ್ತು. ಅದಕ್ಕಾಗಿ ಮತ್ತೆ ನಾಗೇಂದ್ರಗೆ ಸಚಿವ ಸ್ಥಾನ ನೀಡಿ ಸಮಾಧಾನ ಮಾಡಿದ್ದಾರೆ. ಎಸ್ಟಿ ಅಭಿವೃದ್ದಿ ನಿಗಮದ ಹಣ ನುಂಗಿದ್ದು ಕಾಂಗ್ರೆಸ್ ಎಂದು ಇಂದು ದೃಢಪಟ್ಟಿದೆ ಎಂದರು.

ಸಚಿವ ನಾಗೇಂದ್ರ ಬಗ್ಗೆ ನನಗೆ ಅನುಕಂಪವಿದೆ, ಮೊದಲು ನೀನು ವಿಮಾನ ನಿಲ್ದಾಣ ಮಾಡು ಅಂದೆ ಅಷ್ಟರೊಳಗೆ ನಾನಾ ಆರೋಪದಡಿ ಜೈಲು ಪಾಲಾದ. ಬಳ್ಳಾರಿಯಲ್ಲಿ ಭವ್ಯ ವಿಮಾನ ನಿಲ್ದಾಣ ಕಟ್ಟುವ ಕನಸು ನನ್ನದು, ತುಕಾರಾಂ ಅಡ್ಡ ಬರ್ತಾನೆ ಅಂತಾರೆ, ಶೀಘ್ರದಲ್ಲೇ ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ ಮಾಡಬೇಕು, ಇಲ್ಲಾಂದ್ರೆ ಎಲ್ಲರಿಗೂ ಚಳಿ ಬಿಡಿಸುವೆ ಎಂದರು.

ಕೆಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಜಿ.ವೆಂಕಟರಮಣ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೀರನಗೌಡ, ಜಿಲ್ಲಾ ಉಪಾಧ್ಯಕ್ಷ ಹಲಕುಂದಿ ಮಲ್ಲಿಕಾರ್ಜುನ ಗೌಡ್ರು, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಗೌಡ, ಡಾ.ಅರುಣಾ ಕಾಮಿನೇನಿ, ಕೆ.ರಾಮಲಿಂಗಪ್ಪ, ಐನಾಥ ರೆಡ್ಡಿ, ಮುರಹರ ಗೌಡ, ಹಂಪಿ ರಮಣ, ಗುರುಲಿಂಗನ ಗೌಡ, ಎಚ್.ಹನುಮಂತಪ್ಪ, ಅಡವಿಸ್ವಾಮಿ, ವಿಜಯಲಕ್ಷ್ಮೀ, ಹನುಮಂತ ಗುಡಿಗಂಟೆ, ಕೆ.ಹನುಮಂತ, ಮಾರುತಿ ಪ್ರಸಾದ್ ಸರ್ವಶೆಟ್ಟಿ, ರಾಮಚಂದ್ರಪ್ಪ, ಎರಂಗಳಿ ತಿಮ್ಮಾರೆಡ್ಡಿ, ವಿರೂಪಾಕ್ಷ ಗೌಡ ಸೇರಿದಂತೆ ನೂರಾರು ರೈತರು ಇತರರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !