ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಕರಾಳ ಮುಖವಾಗಿ ಮಾರ್ಪಟ್ಟಿರುವ ಎಐ ಹಾಗೂ ಡೀಪ್ಫೇಕ್ ವಿಕೃತಿಗೆ ಇದೀಗ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಬಲಿಯಾಗಿದ್ದು, ಕಿಡಿಗೇಡಿಗಳ ವಿರುದ್ಧ ನಟಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಜಾಲತಾಣಗಳಲ್ಲಿ ತಮ್ಮ ಅನುಮತಿಯಿಲ್ಲದೆ ಅಶ್ಲೀಲವಾಗಿ ಸೃಷ್ಟಿಸಲಾದ ನಕಲಿ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಕೆಂಡಾಮಂಡಲವಾಗಿರುವ ಮೃಣಾಲ್, ಈ ಕುರಿತು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಎಐ ತಂತ್ರಜ್ಞಾನದ ಕರಾಳ ಮುಖ
ಕಿಡಿಗೇಡಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ನಟಿಯ ಮೂಲ ಫೋಟೊಗಳನ್ನು ಅಶ್ಲೀಲ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಮಾರ್ಪಾಡು ಮಾಡಿದ್ದಾರೆ. ಈ ನಕಲಿ ಫೋಟೊಗಳು ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನಟಿ, ಸೈಬರ್ ಕ್ರೈಂ ವಿಭಾಗದ ಕಾನೂನುಗಳ ಅಡಿಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.
ಕಾನೂನು ಸಮರಕ್ಕೆ ನಟಿ ಸಜ್ಜು
ಈ ಕುರಿತು ಕಟುವಾದ ಶಬ್ದಗಳಲ್ಲಿ ಎಚ್ಚರಿಕೆ ನೀಡಿರುವ ಮೃಣಾಲ್, “ನನ್ನ ಅನುಮತಿಯಿಲ್ಲದೆ ಇಂತಹ ಅಸಭ್ಯ ಚಿತ್ರಗಳನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿರುವುದು ಗಂಭೀರ ಅಪರಾಧ. ತಕ್ಷಣವೇ ಎಲ್ಲಾ ಪೋಸ್ಟ್ಗಳನ್ನು ಡಿಲೀಟ್ ಮಾಡದಿದ್ದರೆ ಸೈಬರ್ ಕಾನೂನಿನಡಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ನಟಿಯ ಕಾನೂನು ತಂಡವು ಈಗಾಗಲೇ ನಕಲಿ ಫೋಟೊಗಳನ್ನು ಹಂಚಿಕೊಂಡ ಖಾತೆಗಳ ಲಿಂಕ್ಗಳನ್ನು ಪತ್ತೆ ಹಚ್ಚುತ್ತಿದೆ.
ಕಿಡಿಗೇಡಿಗಳ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು:
ಮೃಣಾಲ್ ಠಾಕೂರ್ ಬೆಂಬಲಕ್ಕೆ ನಿಂತಿರುವ ಲಕ್ಷಾಂತರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ನಕಲಿ ಫೋಟೊಗಳನ್ನು ಯಾರುೂ ಶೇರ್ ಮಾಡಬಾರದು ಮತ್ತು ಕಂಡ ತಕ್ಷಣ ಅಂತಹ ಖಾತೆಗಳನ್ನು ‘ರಿಪೋರ್ಟ್’ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟುವಂತೆ ಸೈಬರ್ ಪೊಲೀಸರಿಗೆ ಒತ್ತಾಯ ಹೆಚ್ಚಾಗಿದೆ.
ಇದನ್ನೂ ಓದಿ:
ಸೆಲೆಬ್ರಿಟಿಗಳಿಗೆ ಹೆಚ್ಚಿದ ಸೈಬರ್ ಭೀತಿ:
ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಪ್ರಮುಖ ನಟಿಯರನ್ನು ಗುರಿಯಾಗಿಸಿಕೊಂಡು ಎಐ ತಂತ್ರಜ್ಞಾನದ ಮೂಲಕ ಡೀಪ್ಫೇಕ್ ವೀಡಿಯೊ ಹಾಗೂ ಫೋಟೊಗಳನ್ನು ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. ಈ ಹಿಂದೆಯೂ ಹಲವು ನಟಿಯರು ಇಂತಹ ಸೈಬರ್ ದಾಳಿಗೆ ತುತ್ತಾಗಿದ್ದು, ಕೇಂದ್ರ ಸರ್ಕಾರ ಮತ್ತು ಸೈಬರ್ ಭದ್ರತಾ ಮಂಡಳಿಗಳು ಇಂತಹ ಸೈಟ್ಗಳ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದ್ದರೂ ಕಿಡಿಗೇಡಿಗಳ ಹಾವಳಿ ಮುಂದುವರಿದಿದೆ.



