ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನಡೆಯಲಿದೆ. ನಾಳೆಯಿಂದಲೇ ಬಣ್ಣ ಬಣ್ಣದ ಹೂವುಗಳ ಹಬ್ಬ ಆರಂಭವಾಗಲಿದ್ದು, ಈ ಬಾರಿ ಹೂವುಗಳು ಗಂಗರ ಸಾಮ್ರಾಜ್ಯ ವೈಭವದ ಕಥೆಯನ್ನು ಹೇಳಲಿವೆ.
ಆಗಸ್ಟ್ 6ರಿಂದ 17ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಪಂಚಲಿಂಗೇಶ್ವರ ದೇವಾಲಯ ಪ್ರಮುಖ ಆಕರ್ಷಣೆ
ಸುಮಾರು 1,200 ವರ್ಷಗಳ ಇತಿಹಾಸ ಹೊಂದಿರುವ ಬೇಗೂರಿನ ಪಂಚಲಿಂಗೇಶ್ವರ ದೇವಾಲಯ ಈ ವರ್ಷದ ಫ್ಲವರ್‌ಶೋನ ಹೃದಯವಾಗಿದೆ. ಇದನ್ನು ಸಂಪೂರ್ಣವಾಗಿ ಹೂವಿನಿಂದ ನಿರ್ಮಿಸಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್. ಗಿರೀಶ್ ಮಾಹಿತಿ ನೀಡಿದ್ದು, ಗಂಗ ಸಾಮ್ರಾಜ್ಯದ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಶೌರ್ಯವನ್ನು ಪ್ರತಿಬಿಂಬಿಸುವ ಹಲವು ಕಲಾಕೃತಿಗಳು ಈ ಬಾರಿ ಹೂಗಳ ಮೂಲಕ ರೂಪುಗೊಳ್ಳಲಿವೆ. ಗಂಗ ಅರಸರ ಬಲಿಷ್ಠ ಗಜಸೇನೆ, ಯುದ್ಧದ ದೃಶ್ಯಗಳು, ಶ್ರವಣ ಬೆಳಗೊಳದ ಬಾಹುಬಲಿ ಪ್ರತಿಮೆ, ತಲಕಾಡಿನ ದೇವಾಲಯಗಳ ಪ್ರತಿರೂಪಗಳು ಸೇರಿದಂತೆ ಅನೇಕ ಆಕರ್ಷಕ ಕಲಾಕೃತಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ ಎಂದಿದ್ದಾರೆ.
ಈ ದೇಗುಲದ ಸ್ಪೆಷಾಲಿಟಿ ಏನು?
ಇದು ಈ ಬಾರಿಯ ಫ್ಲವರ್‌ಶೋನ ಬಿಗ್ ಹೈಲೈಟ್! ಬೇಗೂರು ಪಂಚಲಿಂಗೇಶ್ವರ ದೇವಾಲಯದ ಪ್ರತಿರೂಪ ಸುಮಾರು 50 ಅಡಿ ಎತ್ತರ ಮತ್ತು 24 ಅಡಿ ಅಗಲ ಹೊಂದಿರಲಿದೆ. ಇದನ್ನು ನಿರ್ಮಿಸಲು ಒಟ್ಟು 6 ಲಕ್ಷ ಹೂಗಳನ್ನು ಬಳಸಲಾಗುತ್ತಿದೆ. ಟಿಕೆಟ್ ಕೊಟ್ಟು ಲಾಲ್‌ಬಾಗ್‌ಗೆ ಬರುವ ಜನ ಈ ದೇಗುಲವನ್ನು ನೋಡಿ ಪೈಸಾ ವಸೂಲ್ ಎನ್ನುವುದಂತೂ ಗ್ಯಾರಂಟಿ!
ಯಾವೆಲ್ಲಾ ಹೂವುಗಳನ್ನು ಬಳಸಲಾಗಿದೆ?
ಈ ಬಗ್ಗೆ ತೋಟಗಾರಿಕೆ ಇಲಾಖೆಯ ಉದ್ಯಾನ, ತೋಟ ಮತ್ತು ಪುಷ್ಪಾಲಂಕಾರ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂ. ಜಗದೀಶ್ ಮಾತನಾಡಿ, ಬಿಳಿ, ಹಳದಿ, ಗುಲಾಬಿ ಹಾಗೂ ರಸ್ಟ್ ಬಣ್ಣದ 2.15 ಲಕ್ಷ ಸೇವಂತಿಗೆ ಹೂವುಗಳು, 90 ಸಾವಿರ ಕೆಂಪು ಮತ್ತು ಕಿತ್ತಳೆ ಬಣ್ಣದ ಗುಲಾಬಿ ಹೂವುಗಳನ್ನು ಬಳಕೆ ಮಾಡಲಾಗಿದೆ. ಆರು ದಿನಗಳಿಗೊಮ್ಮೆ ಹೂವುಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಇನ್ನು ದೇವಾಲಯದ ಸುತ್ತ 25 ಸಾವಿರ ಅಲಂಕಾರಿಕ ಎಲೆ ಗಿಡಗಳನ್ನು ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗಂಗ ಸಾಮ್ರಾಜ್ಯದ ಕೊಡುಗೆ
ಗಂಗ ಸಾಮ್ರಾಜ್ಯದಿಂದ ಕನ್ನಡ ಸಾಹಿತ್ಯಕ್ಕೆ, ನೀರಾವರಿಗೆ, ಶಿಲ್ಪಕಲೆಗೆ ಏನೆಲ್ಲಾ ಕೊಡುಗೆಗಳನ್ನು ನೀಡಿದ್ದಾರೆ ಎನ್ನುವುದನ್ನು ಹೂವುಗಳ ಅಲಂಕಾರದ ಮೂಲಕ ಪರಿಚಯಿಸಲಾಗಿದೆ.



