ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡು ಪ್ರಾಣಿಗಳನ್ನು ಸುಮ್ಮನೆ ನೋಡಬೇಕು, ಕೆಣಕಬಾರದು ಎಂದು ದೊಡ್ಡವರು ಸುಮ್ಮನೆ ಹೇಳೋದಿಲ್ಲ! ಇಲ್ಲೊಬ್ಬ ವ್ಯಕ್ತಿ ತನಗೆ ಕಾಡಾನೆ ಜೊತೆ ಸೆಲ್ಫಿ ಬೇಕೇ ಬೇಕೆಂದು ಹೋಗಿ ಭೀಕರವಾಗಿ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದ 52 ವರ್ಷದ ಉದ್ಯಮಿ ನರೇಂದ್ರ ಶಿಂಧೆ ಮೃತರು. ಆನೆ ಹಠಾತ್ ದಾಳಿ ಮಾಡಿದೆ ಎಂದು ಮೃತರ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ತನಿಖೆ ನಡೆಸಿದ ವೇಳೆ ಸೆಲ್ಫಿ ತೆಗೆಯುವ ಪ್ರಯತ್ನ ಮಾಡಿದ್ದರಿಂದಲೇ ಶಿಂಧೆ ಅವರ ಪ್ರಾಣ ಹೋಗಿದೆ ಎಂದು ತಿಳಿದುಬಂದಿದೆ.
ಮನೆಗೆ ವಾಪಾಸಾಗುವಾಗ ದುರಂತ
ರಾಜರಾಜೇಶ್ವರಿ ನಿವಾಸಿಯಾದ ನರೇಂದ್ರ ಶಿಂಧೆ ತಮ್ಮ ಹತ್ತು ಸ್ನೇಹಿತರ ಜೊತೆ ರೆಸಾರ್ಟ್‌ಗೆ ತೆರಳಿದ್ದರು. ರೆಸಾರ್ಟ್‌ನ ವಾಸ ಮುಗಿಸಿ ಮನೆಗೆ ಮರಳುವ ವೇಳೆ ಈ ಘಟನೆ ಸಂಭವಿಸಿದೆ. ಸೋಮವಾರ ಮುಂಜಾನೆ 1.30ರ ವೇಳೆಗೆ ಕನಕಪುರ ವನ್ಯಜೀವಿ ಅಭಯಾರಣ್ಯದ ಬಸವನಬೆಟ್ಟ ಸಮೀಪ, ಕರಬಗೆರೆ ಕೆರೆಯ ಬಳಿ ಮೂತ್ರ ವಿಸರ್ಜನೆಗಾಗಿ ಕಾರ್ ನಿಲ್ಲಿಸಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ.
ಸುಳ್ಳು ಹೇಳಿದ್ರಾ ಸ್ನೇಹಿತರು?
ಕಾರನ್ನು ನಿಲ್ಲಿಸಿದಾಗ ಶಿಂಧೆ ಮಾತ್ರ ಕೆಳಕ್ಕೆ ಇಳಿದಿದ್ದು, ಮೂತ್ರ ವಿಸರ್ಜನೆಗೆ ಹೋಗಿದ್ದರು ಎಂದು ಸ್ನೇಹಿತರು ಹೇಳಿದ್ದಾರೆ. ಆದರೆ ಸ್ಥಳ ಪರಿಶೀಲನೆ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಈ ಮಾತನ್ನು ತಳ್ಳಿ ಹಾಕಿದ್ದಾರೆ. ಶಿಂಧೆ ಕಾರ್‌ನಲ್ಲಿದ್ದಾಗ ಕೆರೆಯ ಬಳಿ ನಿಂತಿದ್ದ ಆನೆಯನ್ನು ನೋಡಿದ್ದರು. ಆನೆ ಜೊತೆ ಫೋಟೊ ತೆಗೆದುಕೊಳ್ಳಲು ಕಾರ್ ನಿಲ್ಲಿಸಿದ್ದಾರೆ. ಆನೆಯತ್ತ ಬೆನ್ನು ಮಾಡಿ ಸೆಲ್ಫಿಗೆ ಯತ್ನಿಸಿದ ವೇಳೆ ಕಾಡಾನೆ ಏಕಾಏಕಿ ಓಡಿಬಂದಿದೆ.
ಆನೆ ಒದ್ದ ಏಟಿಗೆ ಕೆರೆಗೆ ಹಾರಿದ ಶಿಂಧೆ
ಆನೆ ಓಡಿಬಂದಿದ್ದನ್ನು ಕ್ಯಾಮರಾ ಮೂಲಕವೇ ನೋಡಿದ ಶಿಂಧೆ ಗಾಬರಿಯಾಗಿದ್ದಾರೆ. ತಪ್ಪಿಸಿಕೊಳ್ಳಲು ಓಡುವಾಗ ಆನೆ ದಾಳಿ ಮಾಡಿ ಸೊಂಟ ಹಾಗೂ ಬೆನ್ನಿಗೆ ಗಾಯ ಮಾಡಿದೆ. ಆನೆ ತಾಗಿಸಿದ ರಭಸಕ್ಕೆ ಶಿಂಧೆ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಆನೆ ದಾಳಿ ನಡೆಸಿದ ಎರಡರಿಂದ ಮೂರು ಸೆಕೆಂಡ್‌ಗಳಲ್ಲೇ ಶಿಂಧೆ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.
ತಪ್ಪಿಸಿಕೊಳ್ಳೋಕೆ ಚಾನ್ಸೇ ಇರಲಿಲ್ಲ
ಈ ಬಗ್ಗೆ ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಮಾತನಾಡಿ, ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳಿವೆ. ಕಾರಿ ನಿಲ್ಲಿಸಿದ ಜಾಗದಿಂದ ಕೆರೆಗೆ ಬರೀ 50 ಮೀಟರ್ ದೂರ ಇತ್ತು. ಆನೆ ದಾಳಿ ನಡೆಸಿದಾಗ ಶಿಂಧೆ ತಪ್ಪಿಸಿಕೊಳ್ಳೋಕೆ ಚಾನ್ಸೇ ಇರಲಿಲ್ಲ. ಸೆಲ್ಫಿ ತೆಗೆಯುವ ಪ್ರಯತ್ನದ ವೇಳೆ ಕಾಡಾನೆ ದಾಳಿ ಮಾಡಿರುವುದು ಹಾಗೂ ವ್ಯಕ್ತಿ ಮೃತಪಟ್ಟಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ
ಕಾಡು ಪ್ರಾಣಿಗಳನ್ನು ನೋಡುವ ಆಸೆ ಇದ್ದರೆ ನೋಡಿ, ಆದರೆ ಅವುಗಳನ್ನು ಕೆಣಕುವ ಪ್ರಯತ್ನ ಬೇಡ. ಇದರಲ್ಲಿ ಸೆಲ್ಫಿ ತೆಗೆಯುವುದೂ ಕೂಡ ಕೆಣಕುವ ಪ್ರಯತ್ನವೇ. ಪ್ರಾಣಿಗಳ ಹತ್ತಿರ ಹೋಗೋದು, ಕೀಟಲೆ ಮಾಡುವುದು, ಸೆಲ್ಫಿ ಯತ್ನವನ್ನು ನಿಲ್ಲಿಸಬೇಕು. ಇದು ಜೀವಕ್ಕೆ ಹಾನಿಕಾರಕ. ಎಲ್ಲರೂ ಕಾಡುಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಿ. ಸಾಧ್ಯವಾದಷ್ಟು ವನ್ಯಜೀವಿಗಳಿರುವ ಜಾಗದಲ್ಲಿ ಕಾರಿನಿಂದ ಹೊರಕ್ಕೆ ಬರಬೇಡಿ ಎಂದು ಸಲಹೆ ನೀಡದ್ದಾರೆ.



