August 5, 2026
Wednesday, August 5, 2026
spot_img

ನನ್ನ ಮೊದಲ ಆದ್ಯತೆ ರೈತರ ಸಮಸ್ಯೆಗಳನ್ನು ಬಗೆಹರಿಸುವುದು, ಹಾರ ತುರಾಯಿ ಹಾಕಿಸಿಕೊಳ್ಳೋದಲ್ಲ: ಸಚಿವ ಕೆ.ಎಂ. ಶಿವಲಿಂಗೇಗೌಡ

ಹೊಸದಿಗಂತ ವರದಿ ಚನ್ನರಾಯಪಟ್ಟಣ :

ರಾಜ್ಯದಲ್ಲಿ ಆಘಾತಕಾರಿ ಬರಗಾಲ ಆವರಿಸಿದೆ. ರೈತರು ಸಂಕಷ್ಟದಲ್ಲಿರುವಾಗ ಬರ ಅಧ್ಯಯನಕ್ಕೆ ಬಂದ ನನಗೆ ಹಾರ, ತುರಾಯಿ ಹಾಕಿಸಿಕೊಳ್ಳುವುದು ಇಷ್ಟವಿಲ್ಲ. ಆದರೂ ಕಾರ್ಯಕರ್ತರು ಪ್ರೀತಿಯಿಂದ ಹಾಕಿದ್ದಾರೆ. ನಮ್ಮ ಮೊದಲ ಆದ್ಯತೆ ರೈತರ ಸಮಸ್ಯೆಗಳನ್ನು ಬಗೆಹರಿಸುವುದು ಎಂದು ನೂತನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಿರಿಸಾವೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬರ ಸಮೀಕ್ಷೆ ಮತ್ತು ರೈತರ ಸಮಸ್ಯೆ:

ರಾಜ್ಯದಲ್ಲಿ ಬರದ ಛಾಯೆ ಮೂಡಿದ್ದು, ಮೊದಲ ಸಂಪುಟ ಸಭೆಯಲ್ಲೇ ಮುಖ್ಯಮಂತ್ರಿಗಳು ಬರಗಾಲದ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಸಮೀಕ್ಷೆ ನಡೆಸಿ, ಎನ್‌ಡಿಆರ್‌ಎಫ್ (NDRF) ಮಾರ್ಗಸೂಚಿಯಂತೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಬೆಳೆ ವಿಮೆ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ. ಆಗಸ್ಟ್ 13ರಿಂದ ಆರಂಭವಾಗುವ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ರೈತರನ್ನು ಉಳಿಸುವ ಕೆಲಸ ಮಾಡುತ್ತೇವೆ” ಎಂದು ಭರವಸೆ ನೀಡಿದರು.

ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಹಾಗೂ ಖಾತೆ ಹಂಚಿಕೆ:

ಹಾಸನ ಜಿಲ್ಲೆಗೆ ಹೊಸ ನಾಯಕತ್ವವನ್ನು ನೀಡಿದ ಕಾಂಗ್ರೆಸ್ ಹೈಕಮಾಂಡ್‌ಗೆ ಅರಸೀಕೆರೆ ಹಾಗೂ ಜಿಲ್ಲೆಯ ಜನರ ಪರವಾಗಿ ಹೃತ್ತೂರ್ವಕ ಧನ್ಯವಾದಗಳು. ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಾಗ ಮುಖ್ಯಮಂತಿ, ಸಿದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ సింగో ಸುರ್ಜೇವಾಲಾ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ನನ್ನ ತಂದೆ-ತಾಯಿಯ ಪುಣ್ಯದಿಂದ ನನಗೆ ಸಚಿವ ಸ್ಥಾನ ಒಲಿದಿದೆ. ನಾನು ಯಾವುದೇ ನಿರ್ದಿಷ್ಟ ಖಾತೆಗೆ ಬೇಡಿಕೆ ಇಟ್ಟಿಲ್ಲ. ಮುಖ್ಯಮಂತ್ರಿಗಳು ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಅದು ಅವರ ಪರಮಾಧಿಕಾರ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನ ಕೈತಪ್ಪಿದವರ ಅಸಮಾಧಾನ ಸಹಜ:

ಕಾಂಗ್ರೆಸ್ ಶಾಸಕರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, “ಸಂಪುಟ ವಿಸ್ತರಣೆ ವೇಳೆ ಆಕಾಂಕ್ಷಿಗಳಲ್ಲಿ ಅಸಮಾಧಾನ ಉಂಟಾಗುವುದು ಸಹಜ. ಹಿಂದೆ ಜೆ.ಹೆಚ್. ಪಟೇಲ್ ಅವರ ಕಾಲದಲ್ಲಿ 64 ಜನರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಉಳಿದವರಿಗೆ ನಿಗಮ ಮಂಡಳಿ ಹಾಗೂ ಗೂಟದ ಕಾರು ನೀಡಲಾಗಿತ್ತು. ಆದರೆ, ಈಗ ಕೇವಲ 34 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಹಿರಿಯರನ್ನು ಕಡೆಗಣಿಸಿದ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, ಇಂತಹ ಸಣ್ಣಪುಟ್ಟ ಗೊಂದಲಗಳನ್ನು ಸಮರ್ಥಿಸಿಕೊಂಡು ನಿಭಾಯಿಸುವ ಶಕ್ತಿ ಪಕ್ಷಕ್ಕಿದೆ,” ಎಂದರು.

ಹಾಸನದ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ:

ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹಲವು ವರ್ಷಗಳಿಂದ ಜೀವಂತವಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ರೈತರು ಕಾಡಾನೆ ದಾಳಿಗೆ ತುತ್ತಾಗಬಾರದು. ಅದಕ್ಕಾಗಿ ಸೂಕ್ತ ಕ್ರಿಯಾಯೋಜನೆ ರೂಪಿಸಿ ಹೋರಾಟ ಮಾಡುತ್ತೇವೆ. ಪಕ್ಷಭೇದ ಮರೆತು ಹಾಸನ ಜಿಲ್ಲೆಯನ್ನು ಪ್ರಗತಿಯ ಪಥದತ್ತ ಕೊಂಡೊಯ್ಯೋಣ ಎಂದು ಅವರು ಕರೆ ನೀಡಿದರು.

ಮಾಜಿ ಸಿಎಂ ಗೈರು ಮತ್ತು ಬಿಜೆಪಿಯಿಂದ ಬರ ಅಧ್ಯಯನ:

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಗೈರಾದ ವಿಚಾರದ ಬಗ್ಗೆ ಮಾತನಾಡಿದ ಅವರು, “ನಾನು ಹೋಗಿ ಈ ಬಗ್ಗೆ ಕೇಳಿದೆ. ಕಾಲ್ಪನಿಕವಾಗಿ ನಡೆದಂತಹ ಇನ್ಸಿಡೆಂಟ್‌ನಿಂದ ಮತ್ತು ಹುಟ್ಟುಹಬ್ಬವಿದ್ದ ಕಾರಣ ಬರಲು ಆಗಲಿಲ್ಲ. ಆದರೆ ಟಿವಿಯಲ್ಲಿ ಎಲ್ಲವನ್ನೂ ಕುಳಿತು ವೀಕ್ಷಿಸಿದೆ ಎಂದು ಅವರು ತಿಳಿಸಿದ್ದಾರೆ,” ಎಂದರು.

ಇದೇ ವೇಳೆ ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸದ ಬಗ್ಗೆ ಮಾತನಾಡಿದ ಸಚಿವರು, “ಅವರದ್ದು ರಾಷ್ಟ್ರೀಯ ಪಕ್ಷ, ಅವರ ಕರ್ತವ್ಯ ಅವರು ಮಾಡಿದ್ದಾರೆ. ನಾವು ಈಗ ಅಧಿಕಾರದಲ್ಲಿದ್ದೇವೆ. ಮೊದಲು ರೈತ, ಅವರ ಮೇಲಿನ ಶ್ರದ್ದೆ ಮತ್ತು ಭಕ್ತಿ ನಮ್ಮ ಕರ್ತವ್ಯ. ರೈತರ ಪರವಾದ ನಿಲುವು ನಮ್ಮದಾಗಿರುವುದರಿಂದ ನಾವು ಕೂಡ ಅಧ್ಯಯನಕ್ಕೆ ಹೊರಟಿದ್ದೇವೆ” ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !