ಹೊಸದಿಗಂತ ವರದಿ ಬೆಳಗಾವಿ :
ಗಣೇಶೋತ್ಸವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ಸಂಕೇತವಾಗಿದ್ದು, ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಪರ್ಯಾವರಣ ಗತಿವಿಧಿ’ ವತಿಯಿಂದ ಪರಿಸರಸ್ನೇಹಿ ಗಣಪತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ಅಭಿಯಾನಕ್ಕೆ ಜನಕಲ್ಯಾಣ್ ಟ್ರಸ್ಟ್, ಗ್ರೀನ್ ಸೇವಿಯರ್ಸ್ ಅಸೋಸಿಯೇಷನ್, ರೋಟರಿ ಪರಿವಾರ ಬೆಳಗಾವಿ ಹಾಗೂ ಪ್ಯಾಸ ಫೌಂಡೇಶನ್ ಸಂಸ್ಥೆಗಳು ಸಹಯೋಗ ನೀಡಿವೆ.
ಈ ಬಾರಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ನೈಸರ್ಗಿಕ ಬಣ್ಣಗಳಿಂದ ತಯಾರಿಸಲಾದ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ, ಪರಿಸರಸ್ನೇಹಿ ರೀತಿಯಲ್ಲಿ ವಿಸರ್ಜನೆ ಮಾಡುವ ಮೂಲಕ ಸ್ವಚ್ಛ, ಸುಂದರ ಹಾಗೂ ಪರಿಸರಪೂರಕ ಗಣೇಶೋತ್ಸವವನ್ನು ಆಚರಿಸಬೇಕೆಂದು ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

ಮಣ್ಣಿನ ಗಣಪತಿ ಆಯ್ಕೆ ಮಾಡುವುದೇಕೆ?
ಮಣ್ಣಿನ ಗಣಪತಿ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುವುದರಿಂದ ಜಲಮೂಲಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಕೆರೆ, ನದಿ ಹಾಗೂ ಇತರೆ ಜಲಾಶಯಗಳಲ್ಲಿನ ಮೀನು ಸೇರಿದಂತೆ ಜಲಚರ ಜೀವಿಗಳ ರಕ್ಷಣೆಗೆ ಇದು ಸಹಕಾರಿಯಾಗುತ್ತದೆ. ಅಲ್ಲದೆ, ಮಣ್ಣಿನ ಗಣಪತಿ ಖರೀದಿಸುವುದರಿಂದ ಸ್ಥಳೀಯ ಕುಶಲಕರ್ಮಿಗಳು ಹಾಗೂ ಕಲಾವಿದರಿಗೆ ಉದ್ಯೋಗ ಮತ್ತು ಆರ್ಥಿಕ ಬೆಂಬಲ ದೊರೆಯುತ್ತದೆ.
ಪಿ.ಒ.ಪಿ. ಗಣಪತಿಗಳಿಂದ ಉಂಟಾಗುವ ಸಮಸ್ಯೆಗಳು
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ.) ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಲಾದ ಗಣಪತಿ ಮೂರ್ತಿಗಳ ವಿಸರ್ಜನೆಯಿಂದ ಕೆರೆ, ನದಿ ಹಾಗೂ ಇತರೆ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಇದರಿಂದ ಕುಡಿಯುವ ನೀರಿನ ಗುಣಮಟ್ಟ ಕುಸಿದು ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ, ವಿಸರ್ಜನೆಯ ನಂತರ ಪಿ.ಒ.ಪಿ. ಮೂರ್ತಿಗಳ ಕೈ, ಕಾಲು ಹಾಗೂ ಸೊಂಡಿಲು ಮುರಿದು ನೀರಿನಲ್ಲಿ ಚದುರಿಬೀಳುವ ದೃಶ್ಯಗಳು ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದಾಗಿ ಪರಿಸರ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಮಣ್ಣಿನ ಗಣಪತಿ ಮೂರ್ತಿಕಾರರ ಪಟ್ಟಿ
ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಣ್ಣಿನ ಗಣಪತಿ ತಯಾರಿಸುವ ಮೂರ್ತಿಕಾರರ ಸಂಪರ್ಕ ವಿವರಗಳ ಪಟ್ಟಿಯನ್ನು ಅಭಿಯಾನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಬಾರಿ ಎಲ್ಲರೂ ಮಣ್ಣಿನ ಗಣಪತಿಗಳನ್ನೇ ಆಯ್ಕೆ ಮಾಡಿ ಹಸಿರು ಗಣೇಶೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಕರೆ ನೀಡಿದ್ದಾರೆ.



