ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ಪ್ರಕೃತಿ ಪ್ರೇಮಿಗಳು ಮತ್ತು ಪ್ರವಾಸಿಗರು ಕಾತರದಿಂದ ಕಾಯುತ್ತಿದ್ದ ಹೆಮ್ಮೆಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ. 6ರಿಂದ 17ರವರೆಗೆ ಒಟ್ಟು 12 ದಿನಗಳ ಕಾಲ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಾಳೆ ಬೆಳಿಗ್ಗೆ 11:00 ಗಂಟೆಗೆ ಮುಖ್ಯಮಂತ್ರಿಗಳಿಂದ ಅದ್ಧೂರಿಯಾಗಿ ಚಾಲನೆ ಸಿಗಲಿದೆ.
ಗಂಗ ಸಾಮ್ರಾಜ್ಯದ ಇತಿಹಾಸ ಅನಾವರಣ:
ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಈ ಬಾರಿಯ ಹೂಗಳ ಹಬ್ಬದಲ್ಲಿ 1,000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ‘ಗಂಗ ಸಾಮ್ರಾಜ್ಯ’ದ ಗತವೈಭವ ಹೂವುಗಳ ಮೂಲಕ ಮರುಸೃಷ್ಟಿಯಾಗಲಿದೆ. ಗಂಗರ ಕಾಲದ ಪ್ರಸಿದ್ಧ ವಾಸ್ತುಶಿಲ್ಪಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಅವರ ಶೌರ್ಯದ ಕಥೆಗಳನ್ನು ಲಕ್ಷಾಂತರ ಬಣ್ಣ ಬಣ್ಣದ ಹೂವುಗಳನ್ನು ಬಳಸಿ ಲಾಲ್‌ಬಾಗ್‌ನ ಗ್ಲಾಸ್ ಹೌಸ್‌ನಲ್ಲಿ ಕಲಾತ್ಮಕವಾಗಿ ರೂಪಿಸಲಾಗಿದೆ.
ಲಕ್ಷಾಂತರ ಹೂವುಗಳ ಮಾಂತ್ರಿಕ ಲೋಕ:
ಈ ಬಾರಿಯ ಪ್ರದರ್ಶನದಲ್ಲಿ ನೂರಾರು ತಳಿಯ ವಿಶಿಷ್ಟ ಹೂವುಗಳನ್ನು ಬಳಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯು ಸುಮಾರು 2.75 ಕೋಟಿ ರೂ. ವೆಚ್ಚದಲ್ಲಿ ಈ ಪ್ರದರ್ಶನವನ್ನು ಸಿದ್ಧಪಡಿಸಿದೆ. ದೇಶದ ನಾಲ್ಕು ವಿಭಿನ್ನ ರಾಜ್ಯಗಳಿಂದ 130ಕ್ಕೂ ಹೆಚ್ಚು ಅಪರೂಪದ ಹೂವಿನ ಪ್ರಭೇದಗಳನ್ನು ತರಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಲಾಲ್‌ಬಾಗ್ ಕೆರೆ ಬಳಿ ಕೃತಕ ಜಲಪಾತ ಹಾಗೂ ಆಕರ್ಷಕ ಸೆಲ್ಫಿ ಪಾಯಿಂಟ್‌ಗಳನ್ನು ಸಹ ನಿರ್ಮಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದುಬರುವ ನಿರೀಕ್ಷೆಯಿದೆ.
ಇದನ್ನೂ ಓದಿ:
ಟಿಕೆಟ್ ದರ ಮತ್ತು ವೀಕ್ಷಣೆಯ ಸಮಯ:
ಪ್ರತಿದಿನ ಬೆಳಿಗ್ಗೆ 7:00 ರಿಂದ ರಾತ್ರಿ 7:00 ಗಂಟೆಯವರೆಗೆ ಪ್ರದರ್ಶನ ಇರಲಿದ್ದು, ಸಾಮಾನ್ಯ ದಿನಗಳಲ್ಲಿ ವಯಸ್ಕರ ಟಿಕೆಟ್ ದರ:80 ರೂ., ಮಕ್ಕಳಿಗೆ 30 ರೂ. ಇರಲಿದೆ ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30ರೂ.ಇರಲಿದೆ. ಇನ್ನು, ಯುನಿಫಾರ್ಮ್ ಮತ್ತು ಐಡಿ ಕಾರ್ಡ್ ಧರಿಸಿ ಬರುವ ಶಾಲಾ ಮಕ್ಕಳಿಗೆ ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಲಕ್ಷಾಂತರ ವೀಕ್ಷಕರು ಆಗಮಿಸುವ ನಿರೀಕ್ಷೆಯಿರುವುದರಿಂದ ಟ್ರಾಫಿಕ್ ಹಾಗೂ ಗೊಂದಲ ತಡೆಯಲು ಆನ್‌ಲೈನ್ ಟಿಕೆಟ್ ವ್ಯವಸ್ಥೆ ತರಲಾಗಿದೆ. ಸುರಕ್ಷತೆಗಾಗಿ ಇಡೀ ಉದ್ಯಾನದಾದ್ಯಂತ 136 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿದ್ದು, ತುರ್ತು ಸೇವೆಗಾಗಿ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಆಂಬುಲೆನ್ಸ್ ಮತ್ತು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇತಿಹಾಸ ಮತ್ತು ಪ್ರಕೃತಿಯ ಈ ಅದ್ಭುತ ಸಮ್ಮಿಶ್ರಣವನ್ನು ಕಣ್ತುಂಬಿಕೊಳ್ಳಲು ಬೆಂಗಳೂರು ಸಜ್ಜಾಗಿದೆ.



