ಹೊಸದಿಗಂತ ವರದಿ ಬೆಳಗಾವಿ:
ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಸುತಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿ ಬೋನಿನಲ್ಲಿ ಸೆರೆಹಿಡಿದಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಕತಿ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಸುತಗಟ್ಟಿ ಗ್ರಾಮದ ಅರಣ್ಯ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿರತೆಯೊಂದು ಸಂಚರಿಸುವುದು ಗ್ರಾಮಸ್ಥರು ಹಾಗೂ ವಾಹನ ಸವಾರರ ಕಣ್ಣಿಗೆ ಬಿದ್ದಿತ್ತು. ವಾಹನ ಸವಾರರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರೊಂದಿಗೆ ಸುತಗಟ್ಟಿ ಗ್ರಾಮಸ್ಥರು ತಕ್ಷಣವೇ ಕಾಕತಿ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ಪ್ರದೇಶದಲ್ಲಿ ಗಸ್ತು ಕಾರ್ಯವನ್ನು ಹೆಚ್ಚಿಸಿ, ಚಿರತೆಯ ಚಲನವಲನದ ಮೇಲೆ ತೀವ್ರ ನಿಗಾ ವಹಿಸಿತ್ತು. ಚಿರತೆಯನ್ನು ಸೆರೆಹಿಡಿಯಲು ಕಳೆದ ಕೆಲವು ದಿನಗಳ ಹಿಂದೆ ಸೂಕ್ತ ಸ್ಥಳದಲ್ಲಿ ಬೋನನ್ನು ಅಳವಡಿಸಲಾಗಿತ್ತು.
ಆಹಾರ ಹುಡುಕಿಕೊಂಡು ಬಂದ ಚಿರತೆಯು ಬುಧವಾರ ಬೆಳಿಗ್ಗೆ ಕೊನೆಗೂ ಬೋನಿಗೆ ಬಿದ್ದಿದೆ. ಬಳಿಕ ಬೋನಿನಲ್ಲಿದ್ದ ಚಿರತೆಯನ್ನು ವಾಹನದ ಮೂಲಕ ಕಾಕತಿಯ ರಕ್ಷಣಾ ಕೇಂದ್ರಕ್ಕೆ ಸುರಕ್ಷಿತವಾಗಿ ತರಲಾಗಿದೆ. ಮುಂದಿನ ಹಂತದಲ್ಲಿ ಈ ಚಿರತೆಯನ್ನು ಪ್ರಾಣಿ ಸಂಗ್ರಹಾಲಯಕ್ಕೆ ಅಥವಾ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ರವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾಕತಿ ಆರ್‌ಎಫ್‌ಒ ಬಿ.ಎಲ್. ಸನದಿ, ಹುಕ್ಕೇರಿ ಆರ್‌ಎಫ್‌ಒ ಶಿವಕುಮಾರ ಮಾಳಿ, ಡಿ ಆರ್‌ಎಫ್‌ಒಗಳಾದ ಬಸವರಾಜ ಹನಗಂಡಿ, ಪ್ರಭು ತಂಗಡಿ, ರಾಕೇಶ ಮುರಾರಿ, ಮುತಿಗೇಕರ ಹಾಗೂ ಕಾಕತಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಕಾರ್ಯಾಚರಣೆಗೆ ಸುತಗಟ್ಟಿ ಗ್ರಾಮಸ್ಥರು ಪೂರ್ಣ ಸಹಕಾರ ನೀಡಿದ್ದು, ಚಿರತೆ ಸೆರೆಯಾದ ಸುದ್ದಿ ಕೇಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.



