September 23, 2026
Wednesday, September 23, 2026
spot_img

ಬನ್ನೇರುಘಟ್ಟ ಝೂಗೆ ಪುಟಾಣಿ ಗೆಸ್ಟ್‌, ಹಿಪ್ಪೋ ಮರಿ ಎಂಟ್ರಿ: ದತ್ತು ಪಡೆದವರಿಗೆ ಹೆಸರಿಡುವ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಗುವಿನ ಆಗಮನದಿಂದ ಹೇಗೆ ಇಡೀ ಮನೆಯ ಕಳೆಯೇ ಬದಲಾಗಿಬಿಡುತ್ತದೋ ಅದೇ ರೀತಿಯಲ್ಲಿ ಈಗಷ್ಟೇ ಜನಿಸಿರುವ ಪುಟಾಣಿ ಹಿಪ್ಪೋನಿಂದಾಗಿ ಬೆಂಗಳೂರಿನ ಬನ್ನೇರುಘಟ್ಟ ಝೂಗೆ ಹೊಸ ಕಳೆ ಬಂದಿದೆ. ಮುದ್ದಾದ ಗಂಡು ಹಿಪ್ಪೋ ಮರಿಯನ್ನು ಇದೀಗ ಸಾರ್ವಜನಿಕರು ನೋಡಲು ಅವಕಾಶ ಮಾಡಿಕೊಟ್ಟಿದ್ದು, ಈ ಮರಿಯನ್ನು ಯಾರಾದರೂ ದತ್ತು ಪಡೆಯಬಹುದು. ಇದಕ್ಕೆ ಹೆಸರಿಡುವ ಹಕ್ಕು ಕೂಡ ಅವರಿಗೇ ಇರುತ್ತದೆ.

17 ವರ್ಷದ ತಾಯಿ ‘ದಶ್ಯಾ’ ಮತ್ತು 23 ವರ್ಷದ ತಂದೆ ‘ನಾಗ’ನಿಗೆ ಈ ಗಂಡು ಮರಿ ಜನಿಸಿತ್ತು. ಜನನದ ಆರಂಭಿಕ ದಿನಗಳಲ್ಲಿ ತಾಯಿ ಮತ್ತು ಮರಿಯನ್ನು ವೈದ್ಯರ ಕಟ್ಟುನಿಟ್ಟಾದ ನಿಗಾದಲ್ಲಿ ಇಡಲಾಗಿತ್ತು. ತಾಯಿ ಹಾಗೂ ಮಗುವಿನ ಆರೋಗ್ಯ ಚೆನ್ನಾಗಿರುವ ಕಾರಣ ಹಿಪ್ಪೋ ಮರಿಯನ್ನು ಆವರಣಕ್ಕೆ ಬಿಡಲಾಗಿದೆ. ಒಟ್ಟಾರೆ ಬನ್ನೇರುಘಟ್ಟ ಝೂನಲ್ಲಿ ಐದು ಹಿಪ್ಪೋಗಳಿವೆ.

ನೀರಲ್ಲಿ ಮುಳುಗಿ ಪ್ರಾಣಬಿಟ್ಟಿದ್ದ ಹಿಪ್ಪೋ ಮರಿ

ಕಳೆದ ವರ್ಷ ಕೂಡ ಹಿಪ್ಪೋ ಮರಿಯೊಂದು ಜನಿಸಿತ್ತು. ಆದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು. ಮರಿಯನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಪ್ರಾಣಿಪ್ರಿಯರು ಝೂ ಸಿಬ್ಬಂದಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಬಾರಿ ಝೂ ಸಿಬ್ಬಂದಿ ಕೊಂಚವೂ ಬಿಡುವಿಲ್ಲದಂತೆ ಹಿಪ್ಪೋ ಮರಿಯನ್ನು ನೋಡಿಕೊಂಡಿದ್ದಾರೆ.

ಐದು ವರ್ಷದವರೆಗೆ ದತ್ತು

ಈ ಮುದ್ದಾದ ಹಿಪ್ಪೋವನ್ನು ಐದು ವರ್ಷದವರೆಗೆ ದತ್ತು ತೆಗೆದುಕೊಳ್ಳಬಹುದಾಗಿದೆ. ದತ್ತು ತೆಗೆದುಕೊಳ್ಳಲು ಇಚ್ಛಿಸುವವರು ಬನ್ನೇರುಘಟ್ಟದ ಸಿಬ್ಬಂದಿಯನ್ನು ಭೇಟಿ ಮಾಡಬಹುದು. ಈವರೆಗೂ ಇದಕ್ಕೆ ಯಾರೂ ಹೆಸರಿಟ್ಟಿಲ್ಲ. ದತ್ತು ತೆಗೆದುಕೊಂಡವರು ಮರಿಗೆ ಹೆಸರಿಡುವ ಹಕ್ಕನ್ನು ಹೊಂದಿರುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !