ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದಂಗಡಿ ಮಾಲೀಕನ ಮೇಲೆ ದರೋಡೆಕೋರರ ಗ್ಯಾಂಗ್ ಫೈರಿಂಗ್ ನಡೆಸಿ, ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ.
ಘಟನೆಯ ವಿವರ:
ಡಾಬಸ್ಪೇಟೆಯ ಪ್ರಮುಖ ರಸ್ತೆಯಲ್ಲಿರುವ ಪ್ರೇಮ್ ಶಿವ ಜ್ಯುವೆಲ್ಲರಿ ಶಾಪ್ಗೆ ಅಪರಿಚಿತ ದುಷ್ಕರ್ಮಿಗಳು ಗ್ರಾಹಕರ ಸೋಗಿನಲ್ಲಿ ಒಳಪ್ರವೇಶಿಸಿದ್ದಾರೆ. ಒಳಗೆ ಬಂದ ತಕ್ಷಣ ಚಿನ್ನಾಭರಣಗಳನ್ನು ದರೋಡೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಜ್ಯುವೆಲ್ಲರಿ ಶಾಪ್ ಮಾಲೀಕ ಪುನ್ನಾರಾಮ್ ದರೋಡೆಕೋರರನ್ನು ತಡೆಯಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ಯಾಂಗ್, ಮಾಲೀಕನ ಮೇಲೆ ನೇರವಾಗಿ ಗುಂಡಿನ ದಾಳಿ ನಡೆಸಿದೆ.
ಇದನ್ನೂ ಓದಿ:
ಪೊಲೀಸರಿಂದ ತೀವ್ರ ಶೋಧ:
ಗುಂಡಿನ ದಾಳಿ ನಡೆಸಿದ ತಕ್ಷಣ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಾಯಗೊಂಡಿರುವ ಮಾಲೀಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪರಾರಿಯಾಗಿರುವ ದರೋಡೆಕೋರರ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತೀವ್ರ ಬಲೆ ಬೀಸಿದ್ದಾರೆ. ಡಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.



