ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ. ರೋಡ್ ಸರ್ಕಲ್ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಕಾರ್ಪೇಂಟರ್ ವೊರ್ವರು ದಾರುಣವಾಗಿ ಮೃತಪಟ್ಟಿದ್ದು, ಇನ್ನೋರ್ವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿಪ್ಪರ್ ಲಾರಿ ಹಾಗೂ ಆಕ್ಟಿವಾ ದ್ವಿಚಕ್ರ ವಾಹನದ ನಡುವೆ ಈ ಅಪಘಾತ ಸಂಭವಿಸಿ, ಸವಾರರ ಪೈಕಿ ವೃತ್ತಿಯಲ್ಲಿ ಕಾರ್ಪೇಂಟರ್ ಆಗಿರುವ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಯಶವಂತ್ (42) ಅವರು ದಾರುಣವಾಗಿ ಮೃತಪಟ್ಟರೆ, ನಾಯಿಲ ನಿವಾಸಿ ದಯಾನಂದ ಅವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಅಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬಿ.ಸಿ. ರೋಡ್ ಜಂಕ್ಷನ್ ಬಳಿ ಟಿಪ್ಪರ್ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಡಿಯೋ, ಫೋಟೋ ತೆಗೆಯುವುದರಲ್ಲಿ ಬಿಜಿ…
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರ ಸ್ವರೂಪದ ಗಾಯಗೊಂಡು ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಬದಲು ಸ್ಥಳದಲ್ಲಿದ್ದರು ವಿಡಿಯೋ ಹಾಗೂ ಫೋಟೋ ತೆಗೆಯುವುದರಲ್ಲಿ ತಲ್ಲಿನರಾಗಿದ್ದರೆಂದು ಆರೋಪಿಸಲಾಗಿದೆ. ಕೊನೆಗೆ ಆಟೋ ರಿಕ್ಷಾ ಚಾಲಕರೊಬ್ಬರು ಗಾಯಾಳುಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಇಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಈಸಂದರ್ಭ ಚಿಂತಾಜನಕ ಸ್ಥಿತಿಯಲ್ಲಿದ್ದ ಯಶವಂತ್ ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆನ್ನಲಾಗಿದೆ. ಗಾಯಾಳು ದಯಾನಂದ ಅವರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಮರದ ಕೆಲಸ ಮಾಡುವ ಯಶವಂತ ಅವರು ತನ್ನ ಮನೆಗೆ ಮರ ಖರೀದಿಸುವ ನಿಟ್ಟಿನಲ್ಲಿ ಸ್ನೇಹಿತ ದಯಾನಂದ ಅವರ ಜೊತೆ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿರುವ ಮರದ ಮಿಲ್ಲ್ ಗೆ ಹೋಗಿ ವಾಪಾಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ಸವಾರರಿಬ್ಬರು ರಸ್ತೆಗೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡಿದ್ದರು. ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ವಾಹನಗಳ ಸಾಲುಗಟ್ಟಿ ನಿಂತಿತು.ಸುದ್ದಿ ತಿಳಿದ ಬಂಟ್ವಾಳ ಸಂಚಾರಿ ಪೊಲೀಸರು ಅಗಮಿಸಿ ವಾಹನಗಳನ್ಮು ರಸ್ತೆಯಿಂದ ತೆರವುಗೊಳಿಸಿ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ:
ಇದೇ ಸರ್ಕಲ್ ಬಳಿ ಗುರುವಾರ ಮುಂಜಾನೆಯು ಅಪಘಾತವೊಂದು ಸಂಭವಿಸಿದೆಯೆನ್ನಲಾಗಿದೆ. ಇದು ಒಂದೇ ದಿನದಲ್ಲಿ ನಡೆದ ಎರಡನೇ ಅಪಘಾತ ಪ್ರಕರಣವಾಗಿದೆ. ಕೆಲ ಸಮಯದ ಹಿಂದೆಯಷ್ಠೆ ಕಾರೊಂದುಸರ್ಕಲ್ ಗೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದರು. ತದನಂತರ ಸಣ್ಣಪುಟ್ಟ ಅಪಘಾತ ಇಲ್ಲಿ ನಡೆಯುತ್ತಲೇ ಇದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



