ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ರಾಷ್ಟ್ರೀಯ ಕೈಮಗ್ಗ ದಿನವಾಗಿದ್ದು, ಈ ದಿನ ಎಲ್ಲರೂ ಕೈಮಗ್ಗದ ವಸ್ತುವನ್ನು ಖರೀದಿಸಿ ಇನ್ಸ್ಟಾಗ್ರಾಮ್‌ನಲ್ಲಿ ಗೆಟ್‌ರೆಡಿವಿತ್‌ಮಿ ವಿಡಿಯೋ ಪೋಸ್ಟ್ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Gen Zಗಳನ್ನು ಟಾರ್ಗೆಟ್ ಮಾಡಿ ಮಾಡಿರುವ ವಿಡಿಯೋ ಇದಾಗಿದ್ದು, ಎಷ್ಟು ಅದ್ಧೂರಿಯಾಗಿ ಸ್ನೇಹಿತರ ದಿನವನ್ನು ಆಚರಣೆ ಮಾಡಿದ್ದಿರೋ ಅಷ್ಟೇ ಉತ್ಸಾಹದಿಂದ ಕೈಮಗ್ಗದ ದಿನವನ್ನು ಆಚರಿಸಿ ಎಂದು ಸೆಲ್ಫಿ ವಿಡಿಯೋ ಮೂಲಕ ಹೇಳಿದ್ದಾರೆ. ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ಸ್ವದೇಶಿ ಚಳವಳಿಯನ್ನು ಮರೆಯುವಂತಿಲ್ಲ. ಸಾಂಪ್ರದಾಯಿಕ ನೇಕಾರ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಇಂದು ಜನರು ಒಂದು ಕೈಮಗ್ಗದ ವಸ್ತುವನ್ನು ಖರೀದಿಸಿ ಎಂದು ಮನವಿ ಮಾಡಿದ್ದಾರೆ.
ವಿಡಿಯೋದಲ್ಲೇನಿದೆ?
ಸ್ನೇಹಿತರೇ, ನಾವು ಆಗಸ್ಟ್ 7, 1905 ಅನ್ನು ಮರೆಯಬಾರದು. ಆಗಸ್ಟ್ 7, 1905ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಸ್ವದೇಶಿ ಚಳವಳಿ ಪ್ರಾರಂಭವಾಯಿತು. ಸ್ವಾವಲಂಬಿ ಭಾರತದ ಅಡಿಪಾಯ ಹಾಕಲಾಯಿತು. ದೇಶವಾಸಿಗಳು ಬ್ರಿಟಿಷರ ವಿರುದ್ಧ ಯುದ್ಧವನ್ನು ನಡೆಸಿದರು. ಭಾರತದ ಪ್ರತಿಯೊಬ್ಬ ವ್ಯಕ್ತಿಯು ಆ ಪಡೆಗಳನ್ನು ಸೇರಿಕೊಂಡರು. ಕಳೆದ ವಾರವಷ್ಟೇ ನೀವೆಲ್ಲರೂ ಸ್ನೇಹಿತರ ದಿನವನ್ನು ಆಚರಿಸಿದ್ದೀರಿ. ಆಗಸ್ಟ್ 7ರಂದು ಅದೇ ಉತ್ಸಾಹದಿಂದ ಕೈಮಗ್ಗದ ದಿನವನ್ನು ಆಚರಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಕೈಮಗ್ಗ ದಿನವನ್ನು ಆಚರಿಸುವುದು ಎಂದರೆ ಮನೆಯಲ್ಲಿ ಬಟ್ಟೆ ತಯಾರಿಸುವ ಪ್ರತಿಯೊಂದು ಬಡ ಕುಟುಂಬ ಮತ್ತು ನೇಕಾರ ಕುಟುಂಬವನ್ನು ಪ್ರೋತ್ಸಾಹಿಸುವುದು. ಸಣ್ಣ ಕುಟುಂಬಗಳಿಗೆ ಸಬಲೀಕರಣ ನೀಡೋಣ. ಕೈಮಗ್ಗ ದಿನದಂದು ಹ್ಯಾಂಡ್ಲೂಮ್ನ ಏನನ್ನಾದರೂ ವಸ್ತುವನ್ನು ಖರೀದಿಸಲು ಮರೆಯದಿರಿ ಎಂದಿದ್ದಾರೆ.
ಕಠಿಣ ಪರಿಶ್ರಮ, ಕೌಶಲವಿದೆ..
ಪ್ರತಿಯೊಂದು ಕೈಮಗ್ಗದ ಉತ್ಪನ್ನದ ಹಿಂದೆ ಕಠಿಣ ಪರಿಶ್ರಮ ಹಾಗೂ ಕೌಶಲವಿದೆ. ಈ ಉತ್ಪದನ್ನಗಳಲ್ಲಿ ಒಂದನ್ನು ಖರೀದಿ ಮಾಡಿದರೆ ಜೇಬಿಗೆ ಬರೆ ಬೀಳೋದಿಲ್ಲ. ಆದರೆ ನೀವು ಖರೀದಿ ಮಾಡುವ ಒಂದು ವಸ್ತುವಿನಿಂದ ನೇಕಾರರ ಜೀವನದಲ್ಲಿ ಬೆಳಕು ಮೂಡಲಿದೆ. ಇಷ್ಟು ಫ್ಯಾಷನ್, ಇಂಡಸ್ಟ್ರೀಸ್ ಎಲ್ಲವನ್ನೂ ದಾಟಿ ತಮ್ಮ ಸಾಂಪ್ರದಾಯಿಕ ಕಲೆಯನ್ನು ಇವರು ಉಳಿಸಿಕೊಂಡು ಬಂದಿದ್ದಾರೆ. ಮುಂದಿನ ಪೀಳಿಗೆಗೂ ತಮ್ಮ ಕೌಶಲವನ್ನು ಧಾರೆ ಎರೆದಿದ್ದಾರೆ. ಅವರ ಪ್ರಯತ್ನಕ್ಕೆ ನಾವೂ ಕೈ ಜೋಡಿಸೋಣ ಎಂದಿದ್ದಾರೆ.

ಗೆಟ್ ರೆಡಿ ವಿತ್ ಮಿ ವಿಡಿಯೋ ಮಾಡಿ
ಈ ಗೆಟ್‌ರೆಡಿವಿತ್‌ಮಿ ಜೆನ್‌ಝೀಗಳ ಟ್ರೆಂಡ್, ಹೊರಗೆ ಹೋಗಲು, ಮನೆಯಲ್ಲೇ ಮಲಗಲು, ಶಾಲೆಗೆ ಹೋಗಲು ರೆಡಿಯಾಗುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ತಾವು ಹಾಕುತ್ತಿರುವ ಬಟ್ಟೆ ಎಲ್ಲಿಂದ ತಂದಿದ್ದು, ಮೇಕಪ್ ಬ್ರ್ಯಾಂಡ್ ಯಾವುದು, ಬಳೆ ಎಲ್ಲಿಯದ್ದು ಎಂಬೆಲ್ಲಾ ಮಾಹಿತಿ ನೀಡುತ್ತಾ ರೆಡಿಯಾಗುತ್ತಾರೆ. ಪ್ರಧಾನಿ ಮೋದಿ ಕೂಡ ಸ್ವದೇಶಿ ವಸ್ತುಗಳನ್ನು ಖರೀದಿಸಿ ಅದರ ಜತೆ ಗೆಟ್‌ರೆಡಿವಿತ್‌ಮಿ ವಿಡಿಯೋ ಮಾಡಿ ಎಂದು ಹೇಳಿದ್ದಾರೆ. ಈ ಟ್ರೆಂಡ್ ಭಾರತದ ಶ್ರೀಮಂತ ನೇಕಾರಿಕೆ ಪರಂಪರೆಯನ್ನು ಪ್ರದರ್ಶಿಸಲು ಮತ್ತು ನೇಕಾರ ಕುಟುಂಬಗಳಿಗೆ ಬೆಂಬಲ ನೀಡಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಬಡ ನೇಕಾರ ಕುಟುಂಬಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮೂಲಕ ಆತ್ಮನಿರ್ಭರ ಭಾರತವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ನಾವೆಲ್ಲರೂ ಕನಿಷ್ಠ ಒಂದು ಕೈಮಗ್ಗ ಉತ್ಪನ್ನವನ್ನು ಖರೀದಿಸೋಣ, ಅದರ ಬಗ್ಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋಣ. ಇದರಿಂದ ನಮ್ಮ ನೇಕಾರ ಸಹೋದರ-ಸಹೋದರಿಯರ ಪ್ರತಿಭೆ ಮತ್ತು ಕೌಶಲ್ಯವು ಭಾರತ ಮತ್ತು ಪ್ರಪಂಚದಾದ್ಯಂತ ಜನರನ್ನು ತಲುಪುತ್ತದೆ ಎಂದಿದ್ದಾರೆ.



