ಹೊಸದಿಗಂತ ವರದಿ ವೀರಾಜಪೇಟೆ:
ಬಸ್’ನಲ್ಲೇ ಹೃದಯಾಘಾತಕ್ಕೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ. ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಪಿ.ಜೆ ಆನಂದ್ (55)ಮೃತರು.
ಶುಕ್ರವಾರ ಬೆಳಗ್ಗೆ ಮೈಸೂರಿನಿಂದ ವೀರಾಜಪೇಟೆಗೆ ಕರ್ತವ್ಯಕ್ಕೆ ಹಾಜರಾಗಲು ಬಸ್’ನಲ್ಲಿ ಪ್ರಯಾಣಿಸುತ್ತಿದ್ದಾಗ ಇಲವಾಲ ಬಳಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತೆನ್ನಲಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಬಸ್’ನಲ್ಲೇ ಕೊನೆಯುಸಿರೆಳೆದಿದ್ದಾರೆ.
ಆನಂದ್ ಅವರು ಶಿಕ್ಷಣ ಇಲಾಖೆಯಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಈ ಹಿಂದೆ ಟಿ ನರಸೀಪುರ ಬಿ.ಆರ್.ಸಿ., ಹನೂರು ಬಿ.ಆರ್.ಸಿ. ಹಾಗೂ ವಿನಾಯಕನಗರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಶೈಕ್ಷಣಿಕ ವಲಯದಲ್ಲಿ ಗೌರವ ಗಳಿಸಿದ್ದರು.



