August 7, 2026
Friday, August 7, 2026
spot_img

ಬೆಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕೋಕೆ ಹೊಸ ‘ಪಂಚಸೂತ್ರ’: ಖಾಸಗಿ ಬಸ್‌, ಲಾರಿ, ಬೈಕ್‌ ಸಂಚಾರಕ್ಕೆ ಸ್ಟ್ರಿಕ್ಟ್ ರೂಲ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಟ್ರಾಫಿಕ್ ಅಂದ್ರೆ ಈಗ ಜನರ ದೈನಂದಿನ ಜೀವನದ ಭಾಗವೇ ಆಗಿಬಿಟ್ಟಿದೆ. ಕೆಲವೇ ಕಿಲೋಮೀಟರ್‌ ಪ್ರಯಾಣಕ್ಕೂ ಗಂಟೆಗಳ ಕಾಲ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗೆ ತಡ, ಕುಟುಂಬದ ಜೊತೆ ಕಳೆಯಬೇಕಾದ ಸಮಯ ರಸ್ತೆಗೇ ಸೀಮಿತ, ಮಾನಸಿಕ ಒತ್ತಡ, ಇಂಧನ ವ್ಯರ್ಥ—ಇವೆಲ್ಲವೂ ರಾಜಧಾನಿಯ ಜನರ ನಿತ್ಯದ ಸಮಸ್ಯೆಯಾಗಿದೆ. ಇದೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರು ನಗರ ಸಂಚಾರ ಪೊಲೀಸರು ಇದೀಗ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿರುವ ಮಾದರಿಯನ್ನು ಅಧ್ಯಯನ ಮಾಡಿ, ಹೊಸ ‘ಪಂಚಸೂತ್ರ’ ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.

ಹೈದರಾಬಾದ್ ಮಾದರಿಯಲ್ಲಿ ಹೊಸ ಸಂಚಾರ ಯೋಜನೆ

ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಸಂಚಾರ ವಿಭಾಗವು ಐದು ಪ್ರಮುಖ ಕ್ರಮಗಳನ್ನು ಒಳಗೊಂಡ ಯೋಜನೆ ರೂಪಿಸಿದೆ. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಈ ಪ್ರಸ್ತಾವನೆ ಸಿದ್ಧವಾಗಿದ್ದು, ಹೈದರಾಬಾದ್‌ನಲ್ಲಿ ಜಾರಿಯಲ್ಲಿರುವ ಯಶಸ್ವಿ ಮಾದರಿಯನ್ನು ಅನುಸರಿಸಲು ಇಲಾಖೆ ಚಿಂತನೆ ನಡೆಸಿದೆ.

ಖಾಸಗಿ ಬಸ್‌ಗಳಿಗೆ ಹಗಲಿನಲ್ಲಿ ನಿರ್ಬಂಧದ ಪ್ರಸ್ತಾವನೆ

ಪ್ರಸ್ತಾವನೆಯ ಪ್ರಕಾರ, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಖಾಸಗಿ ಬಸ್‌ಗಳ ಸಂಚಾರವನ್ನು ನಗರ ವ್ಯಾಪ್ತಿಯಲ್ಲಿ ನಿರ್ಬಂಧಿಸುವ ಸಾಧ್ಯತೆ ಇದೆ. ವಿವಿಧ ರಾಜ್ಯಗಳಿಂದ ಬರುವ ಬಸ್‌ಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದರಿಂದ ಟ್ರಾಫಿಕ್‌ ದಟ್ಟಣೆ ಹೆಚ್ಚುತ್ತಿದೆ. ಹೀಗಾಗಿ ಹಗಲಿನ ವೇಳೆಯಲ್ಲಿ ಇವುಗಳ ಸಂಚಾರಕ್ಕೆ ಮಿತಿ ವಿಧಿಸುವ ಕುರಿತು ಚರ್ಚೆ ನಡೆಯುತ್ತಿದೆ.

ಭಾರೀ ಲಾರಿಗಳಿಗೂ ನಿಗದಿತ ಸಮಯ

ಅತಿದೊಡ್ಡ ಟ್ರಕ್‌ಗಳು ಹಾಗೂ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೂ ಹೊಸ ನಿಯಮ ಜಾರಿಗೆ ತರುವ ಪ್ರಸ್ತಾವನೆ ಇದೆ. ಪೀಕ್ ಅವರ್‌ಗಳಲ್ಲಿ ಇಂತಹ ವಾಹನಗಳ ಸಂಚಾರವನ್ನು ತಡೆಯುವ ಮೂಲಕ ಉಳಿದ ವಾಹನಗಳ ಓಡಾಟ ಸುಗಮಗೊಳಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.

ಇದನ್ನೂ ಓದಿ:

ಫ್ಲೈಓವರ್‌ಗಳಲ್ಲಿ ಬೈಕ್‌ ಸಂಚಾರಕ್ಕೆ ನಿರ್ಬಂಧ?

ನಗರದ ಕೆಲವು ಪ್ರಮುಖ ಫ್ಲೈಓವರ್‌ಗಳಲ್ಲಿ ಪೀಕ್ ಅವರ್‌ ಸಮಯದಲ್ಲಿ ಬೈಕ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಬಗ್ಗೆ ಕೂಡ ಚಿಂತನೆ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್, ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ, ರಾಗಿಗುಡ್ಡ ಡಬಲ್ ಡೆಕ್ಕರ್ ಹಾಗೂ ಜಕ್ಕೂರು ಫ್ಲೈಓವರ್‌ಗಳಲ್ಲಿ ಈ ಪ್ರಯೋಗ ಆರಂಭಿಸುವ ಸಾಧ್ಯತೆ ಇದೆ. ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು ಹಾಗೂ ವಾಹನಗಳ ವೇಗ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಕಾರ್‌ ಪೂಲಿಂಗ್‌ಗೆ ಅಧಿಕೃತ ಮಾನ್ಯತೆ

ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಕಾರ್ ಪೂಲಿಂಗ್ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೊಳಿಸುವ ಪ್ರಸ್ತಾಪವೂ ಪಂಚಸೂತ್ರದ ಭಾಗವಾಗಿದೆ. ಒಂದೇ ಮಾರ್ಗದಲ್ಲಿ ಪ್ರಯಾಣಿಸುವವರು ಒಂದೇ ವಾಹನ ಬಳಸಿದರೆ ರಸ್ತೆಯ ಮೇಲಿನ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರವನ್ನು ಅಧಿಕಾರಿಗಳು ಮಾಡಿದ್ದಾರೆ.

ಅಂತಿಮ ತೀರ್ಮಾನ ಇನ್ನೂ ಬಾಕಿ

ಸದ್ಯ ಈ ಎಲ್ಲಾ ಕ್ರಮಗಳು ಪ್ರಸ್ತಾವನೆಯ ಹಂತದಲ್ಲಿದ್ದು, ಸರ್ಕಾರದ ಅನುಮೋದನೆ ಹಾಗೂ ವಿವಿಧ ಇಲಾಖೆಗಳ ಸಮಾಲೋಚನೆಯ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಯೋಜನೆ ಜಾರಿಗೆ ಬಂದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ತಗ್ಗಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗುವ ನಿರೀಕ್ಷೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !