ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ಭೀಕರ ಪ್ರವಾಹದಿಂದಾಗಿ ಹಾನಿಗೊಳಗಾಗಿದ್ದ ಅಸ್ಸಾಂನ ಶಿಬಸಾಗರ್ ಜಿಲ್ಲೆಯ ಸಿಮಲುಗುರಿ ಮತ್ತು ಸುತ್ತಮುತ್ತಲಿನ ರೈಲು ಮಾರ್ಗಗಳನ್ನು ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ಯಶಸ್ವಿಯಾಗಿ ದುರಸ್ತಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಎಫ್‌ಆರ್‌ನ ಜನರಲ್ ಮ್ಯಾನೇಜರ್ ಚೇತನ್ ಕುಮಾರ್ ಶ್ರೀವಾಸ್ತವ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಳಿಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳ ಸಮಗ್ರ ಪರಿಶೀಲನೆ ನಡೆಸಿದ್ದಾರೆ.

ರೈಲ್ವೆ ಹಳಿಗಳ ಮೇಲೆಯೇ ಆಶ್ರಯ ಪಡೆದ ನಿರಾಶ್ರಿತರು
ಪರಿಶೀಲನೆಯ ಸಂದರ್ಭದಲ್ಲಿ, ಪ್ರವಾಹದ ಭೀತಿಯಿಂದಾಗಿ ಮಕ್ಕಳು ಸೇರಿದಂತೆ ನೂರಾರು ಸ್ಥಳೀಯರು ತಮ್ಮ ಜಾನುವಾರು ಮತ್ತು ಅಗತ್ಯ ವಸ್ತುಗಳೊಂದಿಗೆ ರೈಲ್ವೆ ಹಳಿಗಳ ಮೇಲೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆದಿರುವುದು ಕಂಡುಬಂದಿದೆ.
ಸದ್ಯಕ್ಕೆ ಡೀಸೆಲ್ ರೈಲುಗಳ ಸಂಚಾರಕ್ಕೆ ಮಾತ್ರ ಅನುಮತಿ
ಸಾರ್ವಜನಿಕರ ಜೀವ ರಕ್ಷಣೆ ಮತ್ತು ಮಾನವೀಯತೆಯ ದೃಷ್ಟಿಯಿಂದ, ದುರಸ್ತಿಗೊಂಡ ಮಾರ್ಗಗಳಲ್ಲಿ ಸದ್ಯಕ್ಕೆ ಕೇವಲ ಡೀಸೆಲ್ ಇಂಜಿನ್ ಚಾಲಿತ ರೈಲುಗಳನ್ನು ಮಾತ್ರ ಚಲಾಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವಿದ್ಯುತ್ ಸ್ಪರ್ಶದಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಮತ್ತು ಪ್ರವಾಹ ಪೀಡಿತ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಸ್ಥಳೀಯ ರೈಲುಗಳು ಮೊರಾನ್‌ಹಟ್ ಮಾರ್ಗವಾಗಿ ಚಲಿಸಲಿವೆ.
ಇದನ್ನೂ ಓದಿ:
ಬದಲಿ ಮಾರ್ಗದಲ್ಲಿ ಓಡಲಿವೆ ದೂರದೂರಿನ ರೈಲುಗಳು
ದೂರದೂರಿನ ರೈಲುಗಳು ಸದ್ಯಕ್ಕೆ ಉತ್ತರ ಲಖಿಂಪುರ-ರಂಗಪಾರ ಉತ್ತರ-ರಂಗಿಯಾ ಮಾರ್ಗವಾಗಿ ಸಂಚರಿಸಲಿವೆ. ಇದರೊಂದಿಗೆ, ಉತ್ತರ ಅಸ್ಸಾಂಗೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಸಹ ನಿಯಮಿತವಾಗಿ ಚಲಾಯಿಸಲಾಗುತ್ತಿದೆ. ಪರಿಸ್ಥಿತಿ ತಿಳಿಯಾಗಿ, ನಿರಾಶ್ರಿತರು ತಮ್ಮ ಮನೆಗಳಿಗೆ ಮರಳಿದ ನಂತರವೇ ವಿದ್ಯುತ್ ರೈಲುಗಳ ಸಂಚಾರ ಮತ್ತು ಪೂರ್ಣ ಪ್ರಮಾಣದ ರೈಲು ಸೇವೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಿಎಂ ಹಿಮಂತ ಬಿಸ್ವಾ ಶರ್ಮಾ ಕೃತಜ್ಞತೆ
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ಸೀಲಿನ್‌ಘಾಟ್-ಅಮ್ಗುರಿ-ಸಿಮಲುಗುರಿ-ಶಿವಸಾಗರ್ ಟೌನ್ ನಡುವಿನ ರೈಲು ಮಾರ್ಗ ದುರಸ್ತಿಯಾಗಿದ್ದು, ಸಂಚಾರ ಆರಂಭವಾಗಿದೆ. ಇದರಿಂದ ಗುವಾಹಟಿ ಮತ್ತು ದಿಬ್ರುಗಢ್ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾಗಿದೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ತಂಡಕ್ಕೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.



