August 7, 2026
Friday, August 7, 2026
spot_img

ಮಕ್ಕಳ ಸುರಕ್ಷತೆ ಕಡೆಗಣನೆ: ‘ಮೆಟಾ’ ಕಂಪನಿಗೆ ಭಾರೀ ದಂಡ ವಿಧಿಸಿದ ಯುಎಸ್ ನ್ಯಾಯಾಲಯ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಸಂಸ್ಥೆಯು ತನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್ಫಾರ್ಮ್‌ಗಳಲ್ಲಿ ಯುವ ಬಳಕೆದಾರರ ಸುರಕ್ಷತೆಯನ್ನು ಗಾಳಿಗೆ ತೂರಿ, ಅವರಿಗೆ ಅಪಾಯವನ್ನುಂಟು ಮಾಡುವ ಮೂಲಕ ಸಾರ್ವಜನಿಕ ನ್ಯೂಸೆನ್ಸ್ ಸೃಷ್ಟಿಸಿದೆ ಎಂದು ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಈ ಗಂಭೀರ ವೈಫಲ್ಯಕ್ಕಾಗಿ ನ್ಯಾಯಾಲಯವು ಮೆಟಾ ಸಂಸ್ಥೆಗೆ ಬರೋಬ್ಬರಿ 4,700 ಕೋಟಿಗೂ ಅಧಿಕ ದಂಡ ವಿಧಿಸಿದೆ. ಇದರೊಂದಿಗೆ ಅಪ್ರಾಪ್ತ ವಯಸ್ಕರಿಗಾಗಿ ಇರುವ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ನಿರ್ಬಂಧಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ಮತ್ತು ದಂಡದ ವಿವರ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ನಲ್ಲಿ ನಡೆದ ವಿಚಾರಣೆ ವೇಳೆ, ಅಪ್ರಾಪ್ತ ವಯಸ್ಕರು ಆನ್‌ಲೈನ್ ಜಾಲಕ್ಕೆ ಸಿಲುಕುವಂತೆ ಮಾಡಿದ್ದಕ್ಕೆ ಮೆಟಾ ಸಂಸ್ಥೆಯೇ ಹೊಣೆ ಎಂದು ಜ್ಯೂರಿ ತೀರ್ಪು ನೀಡಿತ್ತು. ಆಗ ವಿಧಿಸಲಾಗಿದ್ದ $375 ಮಿಲಿಯನ್ ದಂಡದ ಆದೇಶಕ್ಕೆ ಹೆಚ್ಚುವರಿಯಾಗಿ ಈಗ $567 ಮಿಲಿಯನ್ ದಂಡ ವಿಧಿಸಲಾಗಿದೆ.

ದಂಡದ ಒಟ್ಟು ಮೊತ್ತದ ಸುಮಾರು ಮುಕ್ಕಾಲು ಭಾಗವನ್ನು ಮಕ್ಕಳ ಮಾನಸಿಕ ಆರೋಗ್ಯ ಚಿಕಿತ್ಸಾ ನಿಧಿಗಾಗಿ ಕಾಯ್ದಿರಿಸಲಾಗಿದ್ದು, ಇದನ್ನು ಮುಂದಿನ 5 ವರ್ಷಗಳಲ್ಲಿ ಪಾವತಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಆನ್‌ಲೈನ್ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಮತ್ತು ನ್ಯಾಯಾಲಯದ ಆದೇಶಗಳನ್ನು ಮೆಟಾ ಪಾಲಿಸುತ್ತಿದೆಯೇ ಎಂದು ಪರಿಶೀಲಿಸಲು ಬಳಸಲಾಗುತ್ತದೆ.

ಹದಿಹರೆಯದವರ ಫೀಚರ್ಸ್‌ಗೆ ಕಟ್ಟುನಿಟ್ಟಿನ ಬೀಗ

ನ್ಯಾಯಾಧೀಶ ಬ್ರಿಯಾನ್ ಬಿಡ್‌ಶೀಡ್ ಅವರು ಮೆಟಾ ಸಂಸ್ಥೆಯು ಮಕ್ಕಳನ್ನು ಆಕರ್ಷಿಸಲು ರೂಪಿಸಿರುವ ಅಲ್ಗಾರಿದಮ್ ಮತ್ತು ಫೀಚರ್ಸ್‌ಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಯಂಚಾಲಿತ ಚಾಲನೆ, ಕೊನೆಯಿಲ್ಲದ ಸ್ಕ್ರೋಲಿಂಗ್ ಮತ್ತು ಪುಶ್ ನೋಟಿಫಿಕೇಶನ್‌ಗಳಂತಹ ಫೀಚರ್ಸ್‌ಗಳಿಗೆ ಹದಿಹರೆಯದವರು ಸುಲಭವಾಗಿ ವ್ಯಸನಿಗಳಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯ ಹೊರಡಿಸಿರುವ ಪ್ರಮುಖ ಆದೇಶಗಳು:

18 ವರ್ಷದೊಳಗಿನ ಬಳಕೆದಾರರ ಬಳಕೆಯನ್ನು ತಿಂಗಳಿಗೆ ಗರಿಷ್ಠ 90 ಗಂಟೆಗಳಿಗೆ (ದಿನಕ್ಕೆ ಸರಾಸರಿ 3 ಗಂಟೆ) ಸೀಮಿತಗೊಳಿಸಬೇಕು. ಶಾಲಾ ಅವಧಿಯಲ್ಲಿ ಮಕ್ಕಳಿಗೆ ಯಾವುದೇ ಪುಶ್ ನೋಟಿಫಿಕೇಶನ್‌ಗಳು ಹೋಗದಂತೆ ಸಂಪೂರ್ಣವಾಗಿ ನಿರ್ಬಂಧಿಸಬೇಕು.ಹದಿಹರೆಯದವರ ಪೋಸ್ಟ್‌ಗಳ ಮೇಲಿರುವ ‘ಲೈಕ್ ಕೌಂಟ್‌ಗಳನ್ನು’ ಕಡ್ಡಾಯವಾಗಿ ಮರೆಮಾಡಬೇಕು. ನ್ಯೂ ಮೆಕ್ಸಿಕೋದ 13 ವರ್ಷದೊಳಗಿನ ಯಾವುದೇ ಮಗು ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಆದೇಶಗಳ ಪಾಲನೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ವರ್ಷಕ್ಕೆ ಎರಡು ಬಾರಿ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಆದೇಶಿಸಿದೆ.

“ಇದು ಪೋಷಕರಿಗೆ ಸಿಕ್ಕ ಜಯ”

ಸಾಮಾಜಿಕ ಮಾಧ್ಯಮಗಳು ತಮ್ಮ ಮಕ್ಕಳ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಆತಂಕ ಪಡುತ್ತಿದ್ದ ಪ್ರತಿಯೊಬ್ಬ ಪೋಷಕರಿಗೆ ಸಿಕ್ಕ ಜಯ ಇದಾಗಿದೆ. ವಿಶ್ವದ ಅತಿ ದೊಡ್ಡ ತಂತ್ರಜ್ಞಾನ ಕಂಪನಿಯೊಂದು ಯುವ ಪೀಳಿಗೆಯನ್ನು ಅಪಾಯಕ್ಕೆ ದೂಡಿ, ಯಾವುದೇ ಶಿಕ್ಷೆಯಿಲ್ಲದೆ ಲಾಭ ಗಳಿಸದಂತೆ ತಡೆಯುವುದೇ ನಮ್ಮ ಉದ್ದೇಶವಾಗಿತ್ತು ಎಂದು ನ್ಯೂ ಮೆಕ್ಸಿಕೋದ ಅಟಾರ್ನಿ ಜನರಲ್ ರೌಲ್ ಟೊರೆಜ್ ಹೇಳಿದ್ದಾರೆ.

ಇದನ್ನೂ ಓದಿ:

ಮೇಲ್ಮನವಿ ಸಲ್ಲಿಸಲಿರುವ ಮೆಟಾ

ನ್ಯಾಯಾಲಯದ ಈ ತೀರ್ಪನ್ನು ತಾನು ಒಪ್ಪುವುದಿಲ್ಲ ಎಂದು ಮೆಟಾ ಸಂಸ್ಥೆ ಸ್ಪಷ್ಟಪಡಿಸಿದೆ. ಆನ್‌ಲೈನ್‌ನಲ್ಲಿ ಹದಿಹರೆಯದವರನ್ನು ರಕ್ಷಿಸುವಲ್ಲಿ ತನ್ನ ದಾಖಲೆ ಉತ್ತಮವಾಗಿದೆ ಮತ್ತು ವಾಸ್ತವವನ್ನು ತಪ್ಪಾಗಿ ಬಿಂಬಿಸುವ ಇಂತಹ ಆರೋಪಗಳ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಕಂಪನಿ ತಿಳಿಸಿದೆ.

ಮೆಟಾಗೆ ಹೆಚ್ಚಿದ ಕಾನೂನು ಸಂಕಷ್ಟ

ಅಮೆರಿಕದ ಇತಿಹಾಸದಲ್ಲೇ ಸಾಮಾಜಿಕ ಮಾಧ್ಯಮ ಕಂಪನಿಯೊಂದನ್ನು  ಸಾರ್ವಜನಿಕ ನ್ಯೂಸೆನ್ಸ್ ಎಂದು ನ್ಯಾಯಾಲಯ ಘೋಷಿಸಿರುವುದು ಇದೇ ಮೊದಲ ಬಾರಿಯಾಗಿದೆ. ಪ್ರಸ್ತುತ ಅಮೆರಿಕದ 30ಕ್ಕೂ ಹೆಚ್ಚು ರಾಜ್ಯಗಳು ಮಕ್ಕಳ ಮಾನಸಿಕ ಆರೋಗ್ಯದ ಹಾನಿಗೆ ಸಂಬಂಧಿಸಿದಂತೆ ಮೆಟಾ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಂಪನಿಗೆ ಮತ್ತಷ್ಟು ಕಾನೂನು ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !