ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಊಟ ಮಾಡದೆ ಋಷಿಗಳಂತೆ ತಪಸ್ಸು ಆಚರಿಸುವುದು ಒಂದು ವಿಧವಾದರೆ, ಸರಿಯಾದ ಕ್ರಮದಲ್ಲಿ ಊಟ ಮಾಡುವ ಮೂಲಕವೂ ತಪಸ್ಸಿನ ಫಲ ಪಡೆಯಬಹುದು ಎಂದು ಯೋಗಶಾಸ್ತ್ರ ಹೇಳಿದೆ. ಹಾಗಾಗಿ ಭೋಜನವೆಂಬುದು ತಪಸ್ಸು ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಶನಿವಾರದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.

ಪಾಪದ ದಾರಿಗಳಲ್ಲಿ ಆಹಾರವೇ ಪ್ರಧಾನ. ಪಾಪ ನಮ್ಮೊಳಗೆ ಸೇರಿದ ನಂತರ ಬಾಧೆ ನೀಡಲು ಆರಂಭಿಸುತ್ತದೆ. ಸರಿಯಾದ ಭೋಜನ ಕ್ರಮದಿಂದ ರೋಗ ಹಾಗೂ ಪಾಪ ಎರಡನ್ನೂ ನಾಶ ಮಾಡಬಹುದು. ಯಾವುದು ಒಳ್ಳೆಯದೋ ಅದು ಹಿತ ಹಾಗೂ ಯಾವುದು ಇಷ್ಟವೋ ಅದು ಪ್ರಿಯ. ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ದೇಹದ ಒಳಗೆ ಹೋಗುವ ಶ್ವಾಸ ಹಾಗೂ ಆಹಾರದಿಂದಲೇ ದೇಹದ ಒಳಗಿನ ಪಾಪವನ್ನು ನಾಶಮಾಡಲು ಸಾಧ್ಯ. ವಿಧಿಪೂರ್ವಕವಾದ ಪ್ರಾಣಾಯಾಮ ಹಾಗೂ ಸಮರ್ಪಕ ಆಹಾರ ಕ್ರಮದಿಂದ ದೇಹದ ಪಾಪವನ್ನು ತೊಳೆದುಕೊಳ್ಳಬಹುದು ಎಂದ ಶ್ರೀಗಳು, ಆಹಾರದಲ್ಲಿ ಹಿತ ಹಾಗೂ ಮಿತ ಎಂಬುದು ವ್ಯಕ್ತಿಗತವಾಗಿದ್ದು, ವೃತ್ತಿ ಪ್ರವೃತ್ತಿ, ಹಿನ್ನೆಲೆ ಇತ್ಯಾದಿಗಳನ್ನು ಆಧರಿಸಿ ವ್ಯಕ್ತಿಯ ಹಿತ ಮಿತಗಳು ನಿರ್ಧಾರವಾಗುತ್ತದೆ. ಯಜ್ಞಕ್ಕೆ ಯೋಗ್ಯವಾದ ಆಹಾರಕ್ಕೆ ಮೇಧ್ಯಾ ಎಂಬ ಹೆಸರಿದ್ದು, ಅಂತಹ ಉತ್ಕೃಷ್ಟ ಆಹಾರವನ್ನು ಸ್ವೀಕರಿಸುವುದರಿಂದ ನಮ್ಮೊಳಗಿನ ಅಗ್ನಿಯನ್ನು ಜಾಗೃತ ಗೊಳಿಸಬಹುದು. ದೇಹವೆಂಬ ಪೆಟ್ಟಿಗೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳಿಗೂ ಅಗ್ನಿಜಾಗರಣ ಉತ್ತರವಾಗಿದೆ ಎಂದು ತಿಳಿಸಿದರು.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ ಸಿಒಒ ಬಿ.ಎಸ್ ರಾಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ರಾಮಮೂರ್ತಿ ಕೆ.ಬಿ. ದಂಪತಿ ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುರೇಶ ಕಲ್ಲಬ್ಬೆ, ಉದಯ ಭಟ್, ಕಿರಣ ಹೆಗಡೆ, ದಿನ ಪ್ರಧಾನರಾದ ಗುಂಡಿ ಮಂಜಪ್ಪ ದಂಪತಿಗಳು ಉಪಸ್ಥಿತರಿದ್ದರು.



