ಹೊಸದಿಗಂತ ವರದಿ ಬೆಳಗಾವಿ:
ಉತ್ತರ ವಲಯ ವ್ಯಾಪ್ತಿಯ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ರೌಡಿ ವ್ಯಕ್ತಿಗಳ ವಿರುದ್ಧ ಹಲವು ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದೆ.
ಜುಲೈ 2026ರ ಅವಧಿಯಲ್ಲಿ ರೌಡಿ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪ್ರತಿ ಪೊಲೀಸ್ ಠಾಣೆ ಹಾಗೂ ಪೊಲೀಸ್ ವೃತ್ತ ಕಚೇರಿ ಮಟ್ಟದಲ್ಲಿ ರೌಡಿ ನಿಗ್ರಹ ಪಡೆಗಳನ್ನು ರಚಿಸಲಾಗಿದೆ. ಐದು ಜಿಲ್ಲೆಗಳಲ್ಲಿ ಒಟ್ಟು 53 ರೌಡಿ ನಿಗ್ರಹ ಪಡೆಗಳನ್ನು ರಚಿಸಲಾಗಿದೆ.
ಜಿಲ್ಲಾವಾರು ರೌಡಿ ನಿಗ್ರಹ ಪಡೆಗಳು
ಬೆಳಗಾವಿ: 19
ವಿಜಯಪುರ: 11
ಬಾಗಲಕೋಟೆ: 9
ಧಾರವಾಡ: 6
ಗದಗ: 8
148 ಪ್ರಕರಣಗಳಲ್ಲಿ ಮುಂಜಾಗ್ರತಾ ಕ್ರಮ
ರೌಡಿ ವ್ಯಕ್ತಿಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಐದು ಜಿಲ್ಲೆಗಳಲ್ಲಿ ಬಿಎನ್‌ಎಸ್‌ಎಸ್ ಕಲಂ 126, 127, 128 ಹಾಗೂ 129ರ ಅಡಿಯಲ್ಲಿ ಒಟ್ಟು 148 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
23 ರೌಡಿಗಳ ಗಡಿಪಾರು
ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ. ವಿಜಯಪುರದಲ್ಲಿ 1, ಬಾಗಲಕೋಟೆಯಲ್ಲಿ 10, ಧಾರವಾಡದಲ್ಲಿ 2 ಹಾಗೂ ಗದಗ ಜಿಲ್ಲೆಯಲ್ಲಿ 10 ಮಂದಿ ಸೇರಿದಂತೆ ಒಟ್ಟು 23 ರೌಡಿ ವ್ಯಕ್ತಿಗಳ ಗಡಿಪಾರಿಗೆ ಆದೇಶ ಹೊರಡಿಸಲಾಗಿದೆ.
ಗೂಂಡಾ ಕಾಯ್ದೆಯಡಿ 6 ಮಂದಿಯ ವಿರುದ್ಧ ಕ್ರಮ
ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿಯೂ ಕಠಿಣ ಕ್ರಮ ಜರುಗಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 2, ವಿಜಯಪುರದಲ್ಲಿ 2 ಹಾಗೂ ಬಾಗಲಕೋಟೆಯಲ್ಲಿ 2 ಮಂದಿ ಸೇರಿದಂತೆ ಒಟ್ಟು 6 ಜನರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.
ಕೋಕಾ ಕಾಯ್ದೆಯಡಿ 5 ಆರೋಪಿಗಳ ವಿರುದ್ಧ ತನಿಖೆ
ಸಂಘಟಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧವೂ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣೆಯ ಒಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಐವರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅನ್ವಯಿಸಿ ತನಿಖೆ ಕೈಗೊಳ್ಳಲು ಕ್ರಮ ಜರುಗಿಸಲಾಗಿದೆ.
ಇದನ್ನೂ ಓದಿ:
ರೌಡಿ ಚಟುವಟಿಕೆಗಳು ಹಾಗೂ ಸಂಘಟಿತ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಉತ್ತರ ವಲಯದ ಐದು ಜಿಲ್ಲೆಗಳ ಪೊಲೀಸರು ನಿರಂತರ ನಿಗಾ ವಹಿಸಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜದ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಕಠಿಣ ಕಾನೂನು ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



