August 8, 2026
Saturday, August 8, 2026
spot_img

ಬೀದರ್‌ನಲ್ಲಿ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಸಂಭ್ರಮ; ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಿಂದ ಚಾಲನೆ

ಹೊಸದಿಗಂತ ವರದಿ  ಬೀದರ್:

ಶಿಕ್ಷಣ ಕ್ಷೇತ್ರದ ಕುರಿತು ಚಿಂತನ- ಮಂಥನಕ್ಕೆ ವೇದಿಕೆ ಕಲ್ಪಿಸುವ ಶೈಕ್ಷಣಿಕ ಕನ್ನಡ ಸಾಹಿತ್ಯ ಸಮ್ಮೇಳನಗಳು ರಾಜ್ಯದ ಎಲ್ಲೆಡೆ ನಡೆಯುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಸಂದೀಪ್ ಬೂದಿಹಾಳ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಬೀದರ್ ಉತ್ತರ ಘಟಕದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬೀದರ್ ತಾಲ್ಲೂಕು ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಶಿಕ್ಷಕ ವಿಜಯಕುಮಾರ ಪಾಟೀಲ ಯರನಳ್ಳಿ ಸರ್ವಾಧ್ಯಕ್ಷತೆಯಲ್ಲಿ ಬೀದರ್‌ನಲ್ಲಿ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಹಿಂದಿಗಿಂತಲೂ ಈಗ ಹೆಚ್ಚು ಆಗಬೇಕಾಗಿದೆ ಎಂದರು. ಕನ್ನಡ ಕಲೆ, ಸಾಹಿತ್ಯ, ಸಂಸ್ಕಂತಿಯನ್ನು ಒಳಗೊಂಡಿದೆ. ಮಾತೃಭಾಷೆ ಮಕ್ಕಳಲ್ಲಿ ಅಗಾಧ ಜ್ಞಾನ ಬೆಳೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರ ಶಿಕ್ಷಕರಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ನಮ್ಮ ಸಾಧನೆಗಳೇ ಮಾತಾಡಬೇಕು. ವಿಜಯಕುಮಾರ ಪಾಟೀಲ ಕನ್ನಡ ಹೋರಾಟಗಾರರು. ಅವರ ಬದುಕು ಎಲ್ಲರಿಗೂ ಪ್ರೇರಣೆ ಎಂದರು. ಬೆಂಗಳೂರಿನಲ್ಲಿ ಹೋರಾಟ ನಡೆಸಿ, ಸಾವಿರಾರು ಕನ್ನಡ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಟ್ಟ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:

ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ ಮಾತನಾಡಿ, ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಸರ್ಕಾರ ಕನ್ನಡ ಶಾಲೆಗಳ ಉಳಿವಿಗೆ ವಿಶೇಷ ಕಾಳಜಿ ತೋರಬೇಕು. ಕನ್ನಡ ಶಾಲೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಮ್ಮೇಳನ ಸರ್ವಾಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಡಾ. ಚನ್ನಬಸವ ಪಟ್ಟದ್ದೇವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೈರಾಜ್ ಖಂಡ್ರೆ ಮಾತನಾಡಿದರು. ಪರಿಷತ್ ಬೀದರ್ ಉತ್ತರ ಘಟಕದ ಅಧ್ಯಕ್ಷ ಪರಮೇಶ್ವರ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೃಷ್ಟಿ ರಾಘವೇಂದ್ರ ಅಡಿಗ ನೃತ್ಯ ಪ್ರದರ್ಶಿಸಿದರು. ಹೆಡಗಾಪುರದ ಶ್ರೀ ನೇತೃತ್ವ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಘನ ಉಪಸ್ಥಿತಿ ವಹಿಸಿದ್ದರು.

ಪರಿಷತ್ ಜಿಲ್ಲಾ ಘಟಕದ ಖಜಾಂಚಿ ಶಿವಶಂಕರ ಟೋಕರೆ, ಪ್ರಮುಖರಾದ ಸೋಮಶೇಖರ ಬಿರಾದಾರ, ಶಶಿಧರ ಹೊಸಳ್ಳಿ, ಚಂದ್ರಶೇಖರ ಪಾಟೀಲ ಕಲಬುರಗಿ, ರವೀಂದ್ರ ರೆಡ್ಡಿ ಮಾಲಿಪಾಟೀಲ, ಶೇಕ್ ಮಹೆಬೂಬ್ ಪಟೇಲ್, ಡಾ. ಸಚಿನ್ ವಿ. ಪಾಟೀಲ, ಸುಮಿತ್ ಮದನೂರೆ, ದಿಗಂಬರ್ ಮಡಿವಾಳ, ಮಾರುತಿ ಬೌದ್ಧೆ ಮತ್ತಿತರರು ಇದ್ದರು. ಸಂತೋಷ್ ಮಂಗಳೂರೆ ಸ್ವಾಗತಿಸಿದರು. ಲಕ್ಷ್ಮಣ ಪೂಜಾರಿ ನಿರೂಪಿಸಿದರು. ಸಂಗಮೇಶ ನೇಳಗೆ ವಂದಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !