August 8, 2026
Saturday, August 8, 2026
spot_img

ಗಂಡು-ಹೆಣ್ಣು ಒಟ್ಟಾಗಿ ಸಾಗಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ: ಡಾ. ನಾಗಲಕ್ಷ್ಮೀ ಚೌಧರಿ

ಹೊಸದಿಗಂತ ವರದಿ ದಾವಣಗೆರೆ:

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಂದು ಹೆಣ್ಣಿರುವಂತೆ ಪ್ರತಿ ಹೆಣ್ಣಿನ ಯಶಸ್ಸಿನ ಹಿಂದೆ ಪುರುಷರ ಸಹಕಾರವೂ ಬೇಕು. ಹೆಣ್ಣು ಮತ್ತು ಗಂಡು ಒಟ್ಟಾಗಿ ಸಾಗಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಲೀಲಾಜಿ ಸರ್ವಾಧ್ಯಕ್ಷತೆಯಲ್ಲಿ ಏರ್ಪಡಿಸಿರುವ ಎರಡು ದಿನಗಳ ಜಿಲ್ಲಾಮಟ್ಟದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಎಂದರೆ ತಂದೆ, ಗಂಡ, ಮಗ ಹೀಗೆ ಇಡೀ ಕುಟುಂಬವನ್ನು ಸಂಭಾಳಿಸುವ ಮಹಾಶಕ್ತಿ. ಮಹಿಳೆ ಹುಟ್ಟಿನಿಂದಲೇ ನಾಯಕಿ, ಅವಳಿಗೆ ಅವಕಾಶವೊಂದು ಸಿಗಬೇಕಷ್ಟೇ. ಅವಕಾಶ ಸಿಕ್ಕರೆ ಮಹಿಳೆ ಇಡೀ ಜಗತ್ತನ್ನೇ ಆಳಬಲ್ಲಳು. ಕೇವಲ ಹೆಣ್ಣುಮಕ್ಕಳಷ್ಟೇ ಅಲ್ಲ, ಕುಟುಂಬದ ತಂದೆ, ಸಹೋದರ, ಪತಿ, ಮಗ ಹೀಗೆ ಎಲ್ಲಾ ಪುರುಷರೂ ಮಹಿಳೆಯರ ಪ್ರಗತಿಗೆ ಸಹಕರಿಸಬೇಕು ಎಂದು ಅವರು ಸಲಹೆ ನೀಡಿದರು.

ಹದಿಹರೆಯದ ಹುಡುಗಿಯರು 18 ವರ್ಷ ತುಂಬುವುದರೊಳಗೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿಗೂ ಬಾಲ್ಯ ವಿವಾಹ, ಪೋಕ್ಸೊ ಪ್ರಕರಣ ವರದಿಯಾಗುತ್ತಿರುವುದು ನೋವಿನ ಸಂಗತಿ. ಇನ್ನೂ ಹುಟ್ಟದ ಕಂದಮ್ಮಗಳನ್ನು ತಾಯಿಯ ಹೊಟ್ಟೆಯಲ್ಲೇ ಭ್ರೂಣ ಹತ್ಯೆ ಮಾಡುವ ಕ್ರೂರ ಪದ್ಧತಿ ಕೊನೆಯಾಗಬೇಕು. ಮಹಿಳಾ ಲೇಖಕಿಯರ ಲೇಖನಿಗಳು ಈ ಅನಿಷ್ಟಗಳ ವಿರುದ್ಧ ಕ್ರಾಂತಿಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಅವರು ಕರೆ ನೀಡಿದರು.

ಎರಡು ಜಡೆ ಜೊತೆಗೆ ಸೇರಿದರೆ ಬರೀ ಜಗಳ ಎನ್ನಲಾಗುತ್ತದೆ. ಅದನ್ನು ನಾವು ಸುಳ್ಳಾಗಿಸಬೇಕು. ಎಲ್ಲೆಡೆ ಊರದೇವತೆ, ಗ್ರಾಮದೇವತೆ ಹೆಣ್ಣೇ ಹೊರತು ಗಂಡು ದೇವರುಗಳಲ್ಲ. ದುಗ್ಗಮ್ಮ ಪ್ರತಿಯೊಬ್ಬರಲ್ಲಿ ಇದ್ದಾಳೆ. ನೀವು ಆ ದುರ್ಗಿಯನ್ನ ಎಬ್ಬಿಸಬೇಕು. ನಿಮ್ಮ ಶಕ್ತಿಗೆ ಮೀರಿದ್ದು ಯಾವುದೂ ಇಲ್ಲ. ಎಂತಹದ್ದೇ ಅವಮಾನ, ಸವಾಲುಗಳು ಎದುರಾದರೂ, ಅವುಗಳನ್ನೆಲ್ಲ ಮೆಟ್ಟಿ ನಿಂತು ಮುಂದೆ ಬರಬೇಕು ಎಂದು ಅವರು ಸ್ಫೂರ್ತಿ ತುಂಬಿದರು.

ಇದನ್ನೂ ಓದಿ:

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ದಿಕ್ಸೂಚಿ ನುಡಿಗಳನ್ನಾಡಿದರು. ಸಮ್ಮೇಳನ ಪ್ರಧಾನ ಸಂಚಾಲಕಿ ವೀಣಾ ಕೃಷ್ಣಮೂರ್ತಿ ಆಶಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಮಹಿಳಾ ಲೇಖಕಿಯರು ರಚಿಸಿರುವ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಹರಿಹರ ಶಾಸಕ ಬಿ.ಪಿ.ಹರೀಶ್, ಜಗಳೂರು ಶಾಸಕರ ಪತ್ನಿ ತಿಪ್ಪಮ್ಮ, ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯೆ ಬಿ.ಇ.ನೀತಾ, ವೀಣಾ ನಂಜಪ್ಪ, ಬಿ.ವಿ.ಪರಿಮಳಾ ಜಗದೀಶ್, ಕಿರುವಾಡಿ ಗಿರಿಜಮ್ಮ, ಜಯಮ್ಮ ನೀಲಗುಂದ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮತಿ ಜಯಪ್ಪ ಸ್ವಾಗತಿಸಿದರು. ಸೌಭಾಗ್ಯ ಹಿರೇಮಠ, ಹೇಮಾ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಇಂದಿರಾ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾನಗರದ ಮಟ್ಟಿ ಅಂಜನೇಯ ಸ್ವಾಮಿ ದೇವಸ್ಥಾನದಿಂದ ವಿವಿಧ ಕಲಾತಂಡಗಳೊಂದಿಗೆ ನಡೆದ ಕನ್ನಡತಾಯಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !