ಹೊಸದಿಗಂತ ವರದಿ ಬೆಳಗಾವಿ:
ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ 33 ತಂಡಗಳನ್ನು ರಚಿಸಿ, 2,894 ಮಂದಿಯನ್ನು ಪತ್ತೆಹಚ್ಚಲಾಗಿದೆ. ಎಲ್ಲರನ್ನೂ ಸಮಗ್ರವಾಗಿ ಪತ್ತೆಹಚ್ಚುವ ಕೆಲಸ ನಡೆದಿದ್ದರೆ ಒಂದು ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ಸಿಕ್ಕಿಬೀಳುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದರು.
ಭಾನುವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ವಲಸಿಗರಿದ್ದಾರೆ. ನಾವು ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡಿಲ್ಲ ಎಂಬುದನ್ನು ತೋರಿಸಿಕೊಳ್ಳಲು ನಾಟಕೀಯವಾಗಿ ದಾಳಿ ನಡೆಸಲಾಗಿದೆ. ಇಂತಹ ದಾಳಿ ಕೇವಲ ತೋರಿಕೆಯಾಗದೆ, ರಾಜ್ಯದಲ್ಲಿರುವ ಎಲ್ಲ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಹೊರಗೆ ಕಳುಹಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಸಂಪುಟ ವಿಸ್ತರಣೆ ವಿಚಾರದಲ್ಲೂ ಸರ್ಕಾರಕ್ಕೆ ತರಾಟೆ:
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ರವಿಕುಮಾರ್ ಅವರು, ಸಂಪುಟ ವಿಸ್ತರಣೆಯಾಗಿ ಎರಡು ತಿಂಗಳು ಕಳೆದರೂ ಬ್ರಾಹ್ಮಣರು, ಮೀನುಗಾರರು ಸೇರಿದಂತೆ ವಿವಿಧ ಸಮುದಾಯಗಳಿಗೆ ಸಚಿವ ಸ್ಥಾನ ನೀಡಿಲ್ಲ. ಇದು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ವಿರುದ್ದ ಅಸಮಾಧಾನ ಹೋರ ಹಾಕಿದರು.
ಪಟ್ಟಿಯಲ್ಲಿದ್ದ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ ಅವರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಗಾಯತ್ರಿ ಶಾಂತಕುಮಾರ್ ಅವರ ಹೆಸರನ್ನೂ ಕೈಬಿಡಲಾಗಿದೆ. ಮಂಕಾಳು ವೈದ್ಯ ಅವರ ಹೆಸರು ಏಕೆ ಸೇರಿಸಲಾಯಿತು? ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸಚಿವರನ್ನಾಗಿ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು.
ಸುಮಾರು ಶೇ.80ರಷ್ಟು ಸಚಿವರು ‘ಪೇಮೆಂಟ್ ಕೋಟಾ’ದಲ್ಲಿ ಆಯ್ಕೆಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಮಂಕಾಳು ವೈದ್ಯ ಪೇಮೆಂಟ್ ಮಾಡಿಲ್ಲ ಎಂಬ ಕಾರಣಕ್ಕೆ ಅವರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ರೈತರು ಕಂಗಾಲಾಗಿದ್ದಾರೆ. ಕಾಂಗ್ರೆಸ್ ಪಕ್ಷ ಎರಡು ಹೋಳಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೂ ಮಾತನಾಡದೆ ಮೌನವಾಗಿದ್ದಾರೆ. ಅವರನ್ನು ಅಪ್ರಜಾಸತ್ತಾತ್ಮಕವಾಗಿ ಕೆಳಗಿಳಿಸಲಾಗಿದೆ ಎಂದು ಟೀಕಿಸಿದರು.
ಇಡೀ ಒಬಿಸಿ ಸಮಾಜ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿದೆ. ಸದ್ಯ ಸಚಿವರನ್ನು ಮಾತ್ರ ನೇಮಕ ಮಾಡಲಾಗಿದೆ. ಇನ್ನೂ ಖಾತೆ ಹಂಚಿಕೆ ಮಾಡಿಲ್ಲ. ಖಾತೆ ಹಂಚಿಕೆ ಮಾಡಿದ ಬಳಿಕವೂ ಒಂದು ತಿಂಗಳು ಅಸಮಾಧಾನದಲ್ಲೇ ಕಳೆಯಲಿದೆ ಎಂದು ವ್ಯಂಗ್ಯವಾಡಿದರು.



