ಹೊಸದಿಗಂತ ವರದಿ ಚಿತ್ರದುರ್ಗ:
ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳಗಳು ಇನ್ನೂ ನಿಂತಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಣ್ಣ ವಿಷಾದಿಸಿದರು.
ಅರಿವಿನ ಹೊನಲು ಸಂಸ್ಥೆಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪೋಕ್ಸೋ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲಸ ಮಾಡುವ ಜಾಗದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ನಿಯಂತ್ರಿಸುವುದಕ್ಕಾಗಿ ಅನೇಕ ಕಾನೂನುಗಳಿವೆ. ಆದರೂ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳಗಳು ನಿಂತಿಲ್ಲ. ಮಹಿಳೆಯರು ತಮ್ಮ ಮೇಲೆ ದೌರ್ಜನ್ಯಗಳಾದಾಗ ಅಂಜಿಕೆಯಿಲ್ಲದೆ ಠಾಣೆಗಳಲ್ಲಿ ದೂರು ನೀಡಲು ಹಿಂಜರಿಯಬಾರದು. ನಿಮ್ಮ ರಕ್ಷಣೆಗಾಗಿಯೇ ಕಾನೂನು ಇರುವುದು ಎಂದು ಜಾಗೃತಿ ಮೂಡಿಸಿದರು.
ಅರಿವಿನ ಹೊನಲು ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ಮಾತನಾಡಿ, ಮಹಿಳೆ ಅಬಲೆಯಲ್ಲ. ಸಬಲೆ ಎನ್ನುವುದು ಮರೆಯಬಾರದು. ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಕೀಳರಿಮೆಯನ್ನು ಬಿಟ್ಟು ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಪೋಕ್ಸೋ ಕಾಯಿದೆ ಗಟ್ಟಿಗೊಳ್ಳಲು ಸಾಧ್ಯ. ಮಹಿಳೆಯರ ರಕ್ಷಣೆಗಾಗಿಯೇ ಅನೇಕ ಕಾನೂನುಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ:
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅಟ್ರಾಸಿಟಿ ಕಮಿಟಿ ಸದಸ್ಯ ಅವಿನಾಶ್ ಸಿ.ಎಲ್. ಡಾ.ಜಯಲಕ್ಷ್ಮಮ್ಮ, ಡಾ.ಮಧುಸೂದನ, ಹಲಸಂದಿ ಸತೀಶ್, ಗಾಯಿತ್ರಮ್ಮ, ಭೂತರಾಜು, ನಾಗರಾಜ್ ಇವರುಗಳು ಮಾತನಾಡಿದರು.
ಅರಿವಿನ ಹೊನಲು ಸಂಸ್ಥೆ ಕಾರ್ಯದರ್ಶಿ ಅನಿಲ್ ಎಸ್. ಅಳಗವಾಡಿ, ಉಪಾಧ್ಯಕ್ಷ ನಾಗರಾಜ್ ಕೆ. ನಿರ್ದೇಶಕರುಗಳಾದ ರಘು, ರಮೇಶ್ ಲಿಂಗದಹಳ್ಳಿ, ದಿಲೀಪ್ ಆನಿವಾಳ, ಸುದೀಪ್ ಆರ್, ಜಯಣ್ಣ, ಟಿ.ಕಲ್ಯಾಣ್‌ಕುಮಾರ್, ಎಸ್.ಅಣ್ಣೇಶ್, ಆರ್.ನಿತಿನ್, ಸಿ.ಮಂಜು, ಕೋಟೇಶ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



