October 1, 2026
Thursday, October 1, 2026
spot_img

ಎಣ್ಣೆ ಕಿಕ್ ನಲ್ಲಿ ತೊಕ್ಕೊಟ್ಟು ಬಾರ್ ಮುಂದೆ ತಲವಾರು ಝಳಪಿಸಿ ಬಿಲ್ಡಪ್ ನೀಡಿದ ಪುಡಿ ರೌಡಿ, ಸಹಚರ ರಾತೋರಾತ್ರಿ ಅಂದರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶನಿವಾರ ಮಧ್ಯರಾತ್ರಿ ಮಂಗಳೂರು‌ ನಗರದ ಹೊರವಲಯ ತೊಕ್ಕೊಟ್ಟುವಿನ ಕೇಂದ್ರ ಭಾಗದಲ್ಲಿರುವ ವಿನಮ್ರ ಬಾರ್ ಎದುರುಗಡೆ ತಲವಾರು ಬೀಸಿ ಧಾಂದಲೆ ನಡೆಸಿದ್ದ ಪುಡಿ ರೌಡಿ ಹಾಗೂ ಆತನ ಸಹಚರನನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಂಬಿಯೊಳಗೆ ತಳ್ಳಿದ್ದಾರೆ.

ಉಳ್ಳಾಲ ಮಾರ್ಗತ್ತಲೆಯ ನಿವಾಸಿ ರೌಡಿಶೀಟರ್ ಮಹಮ್ಮದ್ ಶಾಕೀರ್ (31) ಹಾಗೂ ರಿಕ್ಷಾ ಚಾಲಕ ಉಳ್ಳಾಲ ಮಂಚಿಲ ನಿವಾಸಿ ಅಶ್ಪಾಕ್ (28) ಬಂಧಿತ ಆರೋಪಿಗಳಾಗಿದ್ದಾರೆ.

ವಿನಮ್ರ ಬಾರ್ ಎದುರುಗಡೆಗೆ ಶನಿವಾರ ಮಧ್ಯರಾತ್ರಿ ಆಟೋ ರಿಕ್ಷಾವೊಂದರಲ್ಲಿ ಪ್ರಯಾಣಿಕನಾಗಿ ಬಂದ ಶಾಕೀರ್ ತಲವಾರನ್ನ ಝಳಪಿಸಿ ಅಲ್ಲಿದ್ದ ಗ್ರಾಹಕರನ್ನ ಬೆದರಿಸಿದ್ದಲ್ಲದೆ, ಬಾರಿನ ಬಾಗಿಲಿಗೆ ತಲವಾರಿನಿಂದ ಹೊಡೆದು ಧಾಂದಲೆ ನಡೆಸಿದ್ದಾನೆ. ರೌಡಿಯೋರ್ವನು ನಡು ರಸ್ತೆಯಲ್ಲೇ ಖುಲ್ಲಂ ಖುಲ್ಲ ತಲವಾರು ಬೀಸಿ ಧಾಂದಲೆ ನಡೆಸಿದ್ದ ಸಿಸಿಟಿವಿ ದೃಶ್ಯವು ಭಾನುವಾರ ಸಂಜೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣ ಕಾರ್ಯಪೃವೃತ್ತರಾದ ಉಳ್ಳಾಲ ಪೊಲೀಸರು ಭಾನುವಾರ ರಾತ್ರಿಯೇ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಕಂಬಿಯೊಳಗೆ ತಳ್ಳಿದ್ದಾರೆ.

ಮದ್ಯ ಜಾಸ್ತಿ ಸೇವಿಸಿದ್ದರಿಂದ ಗಲಾಟೆ ಮಾಡಿದೆ ಸರ್ ಅಂತ ಬಂಧಿತ ಪುಡಿ ರೌಡಿ ಶಾಕೀರ್ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನಂತೆ.
ಮಾಡಿದುಣ್ಣೋ ಮಾರಾಯ ಎಂಬಂತೆ‌ ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಇತರ ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ಜಡಿಯಲಾಗಿದೆ.

Must Read