October 1, 2026
Thursday, October 1, 2026
spot_img

ರೇಷನ್‌ ಕಾರ್ಡ್‌ ಇ-ಕೆವೈಸಿಗಾಗಿ ಕ್ಯೂ ನಿಲ್ಲುವ ಅಗತ್ಯ ಇಲ್ಲ : ʼಅನ್ನ ಸೇವೆʼ ಆ್ಯಪ್ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಷನ್‌ ಕಾರ್ಡ್‌ ಹೊಂದಿರುವವರು ಇನ್ನುಮುಂದೆ ಇ-ಕೆವೈಸಿ ಪ್ರಕ್ರಿಯೆಯಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಕರ್ನಾಟಕ ಆಹಾರ ಇಲಾಖೆಯು ʼಅನ್ನ ಸೇವೆʼ ಎನ್ನುವ ನೂತನ ಅಪ್ಲಿಕೇಷನ್‌ನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್‌ ಅರ್ಷದ್‌ ಅವರು ಈ ನೂತನ ಅಪ್ಲಿಕೇಷನ್‌ಗೆ ಚಾಲನೆ ನೀಡಿದ್ದಾರೆ. ಮೊದಲ ಹಂತವಾಗಿ ಈ ಸೇವೆಯನ್ನು ಎಂಟು ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಒಟ್ಟಾರೆ 4.5 ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಬಹುದು. ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬೀದರ್‌, ಬಳ್ಳಾರಿ ಹಾಗೂ ಕೊಪ್ಪಳದ ಜನ ಅಪ್ಲಿಕೇಷನ್‌ ಮೂಲಕ ಇ-ಕೆವೈಸಿ ಲಿಂಕ್‌ ಮಾಡಬಹುದಾಗಿದೆ.

ಸ್ಮಾರ್ಟ್‌ಫೋನ್‌ ಹೊಂದಿರುವ ಜನ ತಮ್ಮ ಫೋನ್‌ನಲ್ಲಿ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ಲಿಂಕ್‌ ಮಾಡಿಕೊಳ್ಳಬಹುದಾಗಿದೆ. ಹೆಬ್ಬೆರಳ ಗುರುತು (ಬೆರಳಚ್ಚು) ಮೂಡದ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಈ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನದ ಮೂಲಕ ಮುಖದ ಚಹರೆ ಗುರುತಿಸಿ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

Must Read