ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದಲ್ಲಿ ಎಂದಾದರೂ “ನಿನಗಿನ್ನೂ ಎಮೋಷನಲ್ ಮೆಚುರಿಟಿ ಬಂದಿಲ್ಲ”, “ನೀನು ಇನ್ನೂ ಮಗುವಿನಂತೆ ವರ್ತಿಸುತ್ತೀಯಾ” ಎಂಬ ಮಾತನ್ನು ಒಮ್ಮೆಯಾದರೂ ಕೇಳಿರುತ್ತೀರಾ. ಇಂತಹ ಮಾತುಗಳು ಕೇಳಿದ ತಕ್ಷಣ ಕೋಪ, ಬೇಸರ ಮತ್ತು ನಿರಾಸೆಯಾಗುವುದು ಸಹಜ. ಆದರೆ, ಸ್ವಲ್ಪ ಯೋಚಿಸಿದರೆ, ಈ ರೀತಿಯ ಮಾತುಗಳು ನಮ್ಮನ್ನು ನಾವು ತಿದ್ದಿಕೊಳ್ಳಲು ಸಿಗುವ ಒಂದು ಅದ್ಭುತ ಅವಕಾಶ ಎನ್ನಬಹುದು.
ಎಮೋಷನಲ್ ಇಮ್ಮೆಚುರಿಟಿ ಎಂದರೆ ಕೇವಲ ಕೋಪಿಸಿಕೊಳ್ಳುವುದಷ್ಟೇ ಅಲ್ಲ. ಸಣ್ಣ ಸಣ್ಣ ವಿಷಯಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವುದು, ಕೋಪ ಬಂದಾಗ ವಾದ ಮಾಡುವುದು, ತಪ್ಪುಗಳನ್ನು ಒಪ್ಪಿಕೊಳ್ಳದೇ ಇತರರ ಮೇಲೆ ಬೆರಳು ಮಾಡುವುದು, ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಹತೋಟಿ ಕಳೆದುಕೊಳ್ಳುವುದು ಎಮೋಷನಲ್ ಇಮ್ಮೆಚುರಿಟಿ ಲಕ್ಷಣಗಳು. ಅನೇಕ ಬಾರಿ ನಾವು ವಯಸ್ಸಿನಲ್ಲಿ ದೊಡ್ಡವರಾಗಿದ್ದರೂ, ಮನಸ್ಸಿನ ಮಟ್ಟದಲ್ಲಿ ಅರಿವಿನ ಬೆಳೆವಣಿಗೆ ಆಗಿರುವುದಿಲ್ಲ.
ಏನು ಮಾಡಬೇಕು?
ಯಾರಾದರೂ ನಿಮ್ಮನ್ನು ಎಮೋಷನಲ್ ಇಮ್ಮೆಚೂರ್ ಪರ್ಸನ್ ಎಂದು ಕರೆದಾಗ, ಅವರ ಮೇಲೆ ಕೂಗಾಡುವುದು ಅಥವಾ ಜಗಳ ಮಾಡುವುದರಿಂದ ಏನು ಪ್ರಯೋಜನವಿಲ್ಲ. ಬದಲಿಗೆ, ಶಾಂತವಾಗಿ ಆ ಮಾತನ್ನು ಕೇಳಿಸಿಕೊಳ್ಳಿ.
ಅವರು ಹಾಗೆ ಹೇಳಲು ಕಾರಣವೇನು? ನನ್ನ ನಡವಳಿಕೆಯಲ್ಲಿ ನಿಜವಾಗಿಯೂ ತಪ್ಪಿತ್ತೇ? ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.
ಭಾವನೆಗಳನ್ನು ತಡೆಯುವುದು ಕಷ್ಟ, ಆದರೆ ಅವುಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ಕಲಿಯುವುದು ಪ್ರಬುದ್ಧತೆ. ಕೋಪ ಅಥವಾ ಬೇಸರ ಬಂದಾಗ ತಕ್ಷಣ ಮಾತನಾಡದೇ ಸ್ವಲ್ಪ ಸಮಯ ತಡೆದು ಯೋಚಿಸಿ.
ನಾವು ಪರಿಪೂರ್ಣರಲ್ಲ ಎಂಬುದನ್ನು ಒಪ್ಪಿಕೊಳ್ಳುವುದೇ ಮೆಚುರಿಟಿಯ ಮೊದಲ ಹೆಜ್ಜೆ. ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಂಡು ಬದಲಾಗಲು ಸಿದ್ಧರಾಗಿ.
ಎಮೋಷನಲ್ ಮೆಚುರಿಟಿ ಎನ್ನುವುದು ರಾತ್ರೋರಾತ್ರಿ ಬರುವುದಿಲ್ಲ. ಅದೊಂದು ನಿರಂತರ ಕಲಿಕೆ. ಇತರರ ವಿಮರ್ಶೆಯನ್ನು ಒಂದು ಸವಾಲಾಗಿ ಸ್ವೀಕರಿಸಿ, ನಮ್ಮ ಸಣ್ಣತನಗಳನ್ನು ಕಳೆದುಕೊಂಡು ಬೆಳೆಯುವುದು ನಮಗೆ ಮತ್ತು ನಮ್ಮ ಸಂಬಂಧಗಳಿಗೆ ಅತ್ಯಂತ ಅಗತ್ಯ. ನೆನಪಿಡಿ, ಬದುಕು ಎಂದರೆ ಕೇವಲ ಬೆಳೆಯುವುದಲ್ಲ, ಬದಲಾಗುವುದು ಕೂಡ!



