August 11, 2026
Tuesday, August 11, 2026
spot_img

Food | ಗಂಜಿ ಊಟದ ಜೊತೆಗೆ ಉಪ್ಪಲ್ಲಿ ಹಾಕಿದ ಹಲಸಿನ ಸೊಳೆ ಪಲ್ಯ ಇದ್ರೆ ಸ್ವರ್ಗ… ಸ್ವರ್ಗ ಕಣ್ರೀ…

ಮಳೆಗಾಲದಲ್ಲಿ ಅನ್ನದ ಜೊತೆ ಬಿಸಿ ಬಿಸಿಯಾಗಿ ಸವಿಯಲು ಹಲಸಿನಕಾಯಿ ಉಪ್ಪು ಸೊಳೆ ಪಲ್ಯ ತುಂಬಾ ರುಚಿಕರ. ಮನೆಯಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿ ಸೊಳೆ ಇದ್ದರೆ, ಕಡಿಮೆ ಪದಾರ್ಥಗಳಲ್ಲೇ ಈ ಸರಳ ಪಲ್ಯವನ್ನು ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿ ಸೊಳೆ – 2 ಕಪ್
ತೆಂಗಿನೆಣ್ಣೆ – 3 ಚಮಚ
ಸಾಸಿವೆ – 1 ಚಮಚ
ಒಣಮೆಣಸು – 1-2
ಕರಿಬೇವು – ಸ್ವಲ್ಪ
ಅರಿಶಿನ ಪುಡಿ – ಚಿಟಿಕೆ
ನೀರು – ಅಗತ್ಯವಿರುವಷ್ಟು

ಮಾಡುವ ವಿಧಾನ

ಮೊದಲಿಗೆ ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿ ಸೊಳೆಗಳನ್ನು 2–3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಇದರಿಂದ ಹೆಚ್ಚಿನ ಉಪ್ಪು ಕಡಿಮೆಯಾಗುತ್ತದೆ. ನಂತರ ಸೊಳೆಗಳನ್ನು ತೆಳುವಾಗಿ ಉದ್ದಕ್ಕೆ ಹೆಚ್ಚಿಕೊಳ್ಳಿ.

ಬಾಣಲೆಯನ್ನು ಒಲೆಯ ಮೇಲಿಟ್ಟು ತೆಂಗಿನೆಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ಸಿಡಿದ ನಂತರ ಒಣಮೆಣಸು ಹಾಗೂ ಕರಿಬೇವು ಸೇರಿಸಿ ಒಗ್ಗರಣೆ ಮಾಡಿ.

ಈಗ ಹೆಚ್ಚಿಟ್ಟ ಹಲಸಿನಕಾಯಿ ಸೊಳೆಗಳನ್ನು ಬಾಣಲೆಗೆ ಹಾಕಿ, ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಕಲಸಿ. ಸೊಳೆಗಳಿಗೆ ಸ್ವಲ್ಪ ನೀರು ಸಿಂಪಡಿಸಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ.

ಹಲಸಿನಕಾಯಿ ಸೊಳೆಗಳು ಮೆದುವಾಗಿ ಬೇಯುವವರೆಗೆ ಮಧ್ಯೆ ಮಧ್ಯೆ ಕಲಸುತ್ತಿರಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಬಹುದು. ಸೊಳೆಗಳು ಚೆನ್ನಾಗಿ ಬೆಂದ ನಂತರ ಉರಿ ಆಫ್ ಮಾಡಿ.

ರುಚಿಕರವಾದ ಹಲಸಿನಕಾಯಿ ಉಪ್ಪು ಸೊಳೆ ಪಲ್ಯ ಸಿದ್ಧ. ಬಿಸಿ ಅನ್ನ, ಸಾರು ಅಥವಾ ರಸಂ ಜೊತೆ ಸವಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !