August 11, 2026
Tuesday, August 11, 2026
spot_img

ನರಿಯಾಗುವುದಕ್ಕಿಂತ ನಾಯಿಯಾಗುವುದೇ ಮೇಲು: ಹಿರಿಯ ನಟನ ವಿರುದ್ಧ ಕಂಗನಾ ಕಟು ಟೀಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸದೆ ಹಾಗೂ ನಟಿ ಕಂಗನಾ ರನೌತ್ ಮತ್ತೊಮ್ಮೆ ತಮ್ಮ ಸೈದ್ಧಾಂತಿಕ ನಿಲುವುಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಮಾತನಾಡಿದ್ದ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್ ಶಾ, ಬಾಲಿವುಡ್ ಮೌನವನ್ನು ಟೀಕಿಸುವಾಗ “ಬಾಯಿಯಲ್ಲಿ ಮೂಳೆ ಹಿಡಿದ ನಾಯಿಗೆ ಬೊಗಳಲು ಸಾಧ್ಯವಿಲ್ಲ” ಎಂಬ ಮಾತನ್ನು ಬಳಸಿದ್ದರು.

ಆದರೆ, ಇತ್ತೀಚೆಗೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿರಿಯ ನಟ ಹಾಗೂ ಗಾಯಕ ಪಿಯೂಷ್ ಮಿಶ್ರಾ, ಈ ಹೇಳಿಕೆಯನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಜಾರ್ಖಂಡ್‌ನಲ್ಲಿ ಉದ್ಯೋಗ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಹೋರಾಡುತ್ತಿರುವಾಗ ಮತ್ತು ಅವರ ಮೇಲೆ ಪೋಲಿಸ್ ದೌರ್ಜನ್ಯ ನಡೆದಾಗ ನಾಸಿರುದ್ದೀನ್ ಶಾ ಏಕೆ ಮೌನವಾಗಿದ್ದಾರೆ ಎಂದು ಮಿಶ್ರಾ ಕಿಡಿಕಾರಿದ್ದರು.

ಕಂಗನಾ ರನೌತ್ ಬೆಂಬಲ ಹಾಗೂ ತೀಕ್ಷ್ಣ ಪ್ರತಿಕ್ರಿಯೆ

ಪಿಯೂಷ್ ಮಿಶ್ರಾ ಅವರ ಈ ಪ್ರತಿಕ್ರಿಯೆಯನ್ನು ಬೆಂಬಲಿಸಿದ ಕಂಗನಾ ರನೌತ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಾಸಿರುದ್ದೀನ್ ಶಾ ಅವರ ನಿಲುವನ್ನು ‘ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವ ನರಿಯ ಜಾಣತನ’ಕ್ಕೆ ಹೋಲಿಸಿದ ಕಂಗನಾ, “ನಾವು ಯಾವ ದೇಶದ ಅನ್ನ ತಿನ್ನುತ್ತೇವೆಯೋ, ಆ ದೇಶವನ್ನು ರಕ್ಷಿಸುವುದು ಮತ್ತು ಅದಕ್ಕಾಗಿ ಹೋರಾಡುವುದು ಪ್ರತಿಯೊಬ್ಬ ನಾಗರಿಕನ ಹೆಮ್ಮೆಯಾಗಬೇಕು” ಎಂದು ಪ್ರತಿಪಾದಿಸಿದ್ದಾರೆ.

“ಇಂದಿನ ಕಾಲಘಟ್ಟದಲ್ಲಿ ‘ನಾಯಿ’ ಎನಿಸಿಕೊಳ್ಳುವುದು ಕೀಳಲ್ಲ, ಏಕೆಂದರೆ ನಿಷ್ಠೆ, ಕರ್ತವ್ಯಪ್ರಜ್ಞೆ ಮತ್ತು ಮುಗ್ಧತೆ ಅಪರೂಪದ ಗುಣಗಳು. ತತ್ವವಿಲ್ಲದ ನರಿಯಾಗುವುದಕ್ಕಿಂತ ನಿಷ್ಠಾವಂತ ನಾಯಿಯಾಗುವುದೇ ಲೇಸು” ಎಂದು ಕಂಗನಾ ಮಾರ್ಮಿಕವಾಗಿ ಬರೆದಿದ್ದಾರೆ.

ಜಾರ್ಖಂಡ್ ವಿದ್ಯಾರ್ಥಿಗಳ ಪರ ಧ್ವನಿ

ಈ ವಾಕ್ಸಮರದ ನಡುವೆಯೂ ಕಂಗನಾ ರನೌತ್ ಜಾರ್ಖಂಡ್‌ನಲ್ಲಿ ಸಂಕಷ್ಟದಲ್ಲಿರುವ ಯುವ ಉದ್ಯೋಗಾಕಾಂಕ್ಷಿಗಳ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ವಿಧಾನಸಭೆ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ನಡೆದ ಲಾಠಿಚಾರ್ಜ್, ಅಶ್ರುವಾಯು ಹಾಗೂ ಜಲಫಿರಂಗಿ ಬಳಕೆಯನ್ನು ಖಂಡಿಸಿದ ಅವರು, ಯುವಜನತೆಯ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರಗಳು ಮತ್ತು ಗಣ್ಯರು ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !